Publish Date: Tue, 06 Jul 2021 (09:20 IST)
Updated Date: Tue, 06 Jul 2021 (09:26 IST)
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡುವೆ ನಡೆದಿರುವ ಮಾತಿನ ಚಕಮಕಿಗೆ ನಿಜ ಕಾರಣ ಅಕ್ರಮ ಗಣಿಗಾರಿಕೆ ಬಗ್ಗೆ ಸುಮಲತಾ ಮಾತನಾಡಿರುವುದು ಎನ್ನಲಾಗಿದೆ.
ಈ ಮಾತಿನ ಚಕಮಕಿಗೆ ಮೂಲವಾಗಿದ್ದು ಸುಮಲತಾ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದ ಕೆಆರ್ ಎಸ್ ಜಲಾಶಯಕ್ಕೆ ಹಾನಿಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದು. ಜಲಾಶಯದಲ್ಲಿ ಬಿರುಕಿನ ವಿಚಾರವನ್ನು ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲಿಸಲು ಸ್ಥಳೀಯ ನಾಯಕರು ಬಿಡುತ್ತಿಲ್ಲ ಎಂದು ಸುಮಲತಾ ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಕುಟುಕಿದ್ದು ಎಚ್ ಡಿಕೆ ಕೆರಳಿಸಿದೆ.
ಇದೇ ಕಾರಣಕ್ಕೆ ಅವರೂ ಸುಮಲತಾ ವಿರುದ್ಧ ತೊಡೆ ತಟ್ಟಿದ್ದಾರೆ. ಇದರ ಜೊತೆಗೆ ಮೈ ಶುಗರ್ ಫ್ಯಾಕ್ಟರಿ ಪುನರಾರಂಭದ ಕುರಿತು ಇತ್ತೀಚೆಗಷ್ಟೇ ಕುಮಾರಸ್ವಾಮಿ ಕಾರ್ಖಾನೆಯ ನೌಕರರು, ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ನೌಕರರು, ಸ್ಥಳೀಯ ನಾಯಕರು ಕಾರ್ಖಾನೆಯನ್ನು ಖಾಸಗೀಕರಣಗೊಳಿಸದಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕೆಂದು ಕುಮಾರಸ್ವಾಮಿಗೆ ಒತ್ತಾಯ ಹೇರಿದ್ದರು.
ಆದರೆ ಸುಮಲತಾ ಹಿಂದೆ ಖಾಸಗಿಗಾಗದರೂ ಸರಿಯೇ, ಸರ್ಕಾರವಾದರೂ ಸರಿಯೇ ಒಟ್ಟಿನಲ್ಲಿ ಕಾರ್ಖಾನೆ ಪುನರಾರಂಭಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದೇ ಇಬ್ಬರು ನಾಯಕರ ನಡುವಿನ ಶೀತಲ ಸಮರ ಸ್ಪೋಟಗೊಳ್ಳಲು ಕಾರಣವಾಗಿದೆ. ಆದರೆ ಸುಮಲತಾ ವಿರುದ್ಧ ಕಿಡಿ ಕಾರುವಾಗ ತಪ್ಪಾಗಿ ಮಾತನಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ.