Publish Date: Tue, 19 Mar 2024 (09:44 IST)
Updated Date: Tue, 19 Mar 2024 (09:52 IST)
ನವದೆಹಲಿ: ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿರುವ ಸುಮಲತಾ ಅಂಬರೀಶ್ ಲಾಬಿ ನಡೆಸಲು ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ.
ದೆಹಲಿಯಲ್ಲಿ ನಿನ್ನೆ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿರುವ ಸುಮಲತಾ ತಮಗೇ ಮಂಡ್ಯ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ತಮಗೇ ಮಂಡ್ಯ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳಲ್ಲಿ ಜೆಡಿಎಸ್ ಗೆ ಟಿಕೆಟ್ ಸಿಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಇದರಲ್ಲಿ ಸತ್ಯಾಂಶವಿಲ್ಲ ಎಂದು ಸುಮಲತಾ ಹೇಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅದ್ಯಕ್ಷ ಜೆಪಿ ನಡ್ಡಾರನ್ನು ನಿನ್ನೆ ಭೇಟಿ ಮಾಡಿದ್ದ ಸುಮಲತಾ ಬಳಿಕ ನಾಳೆಯವರೆಗೂ ಇಲ್ಲಿಯೇ ಇರಬೇಕು ಎಂದು ಹೇಳಿರುವುದಾಗಿ ಹೇಳಿದ್ದಾರೆ. ಹೀಗಾಗಿ ಸುಮಲತಾ ಇಂದೂ ದೆಹಲಿಯಲ್ಲಿ ಠಿಕಾಣಿ ಹೂಡಿದ್ದಾರೆ. ಅವರ ಭವಿಷ್ಯ ಇಂದು ತೀರ್ಮಾನವಾಗಲಿದೆ.
ನೀವು ನಿಶ್ಚಿಂತರಾಗಿರಿ ನಿಮ್ಮ ಜೊತೆ ನಾವಿದ್ದೇವೆ ಎಂದು ಹೈಕಮಾಂಡ್ ಭರವಸೆ ಕೊಟ್ಟಿದೆ ಎಂದು ಸುಮಲತಾ ಹೇಳಿಕೊಂಡಿದ್ದಾರೆ. ಹಾಗಿದ್ದರೂ ದೆಹಲಿಯಲ್ಲೇ ಇದ್ದು ಟಿಕೆಟ್ ಗಾಗಿ ತಮ್ಮ ಪ್ರಯತ್ನ ಇಂದೂ ಮುಂದುವರಿಸಲಿದ್ದಾರೆ.