ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ವಿರುದ್ಧ ಸದಾ ಟೀಕಾಪ್ರಹಾರ ನಡೆಸುತ್ತಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ಬಿರುಗಾಳಿ ಎದ್ದಿದೆ.
ಇದೀಗ ಬಿಜೆಪಿ ಹೈಕಮಾಂಡ್‌ಗೆ ಸಡ್ಡು ಹೊಡೆಯಲು ಬಿಜೆಪಿಯ ಎಲ್ಲ ಭಿನ್ನಮತೀಯರು ನಾಳೆ ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧರಿಸಿದ್ದಾರೆ. ಇದನ್ನು ಶಾಸಕ ರಮೇಶ್ ಜಾರಕಿಹೊಳಿ ಖಚಿತಪಡಿಸಿದ್ದಾರೆ.
ಯತ್ನಾಳ ಅವರ ಉಚ್ಚಾಟನೆ ವಿಚಾರವನ್ನು ಮರು ಪರಿಶೀಲನೆ ನಡೆಸುವಂತೆ ಹೈಕಮಾಂಡ್‌ಗೆ ಪತ್ರ ಬರೆಯುತ್ತೇವೆ. ಈ ಸಂಬಂಧ ಎಲ್ಲ ಭಿನ್ನಮತೀಯರು ಬೆಂಗಳೂರಿನಲ್ಲಿ ಶುಕ್ರವಾರ ಸಭೆ ಸೇರಲು ನಿರ್ಧರಿಸಿದ್ದೇವೆ. ಯತ್ನಾಳ ವಿರುದ್ಧದ ಕ್ರಮ ನಿರೀಕ್ಷಿತ. ಜತೆಗೆ ನಮ್ಮ ವಿರೋಧಿ ಬಣಕ್ಕೂ ಎಚ್ಚರಿಕೆ ನೀಡಲಾಗಿದೆ ಎಂದು ಜಾರಕಿಹೊಳಿ ಹೇಳಿದರು.
ಕೇಂದ್ರದ ಅಗ್ರ ನಾಯಕರಲ್ಲಿ ಒಬ್ಬರೊಂದಿಗೆ ನಾನು ಮಾತಾಡಿದ್ದೇನೆ. ಬಿಜೆಪಿ ನಮಗೆ ತಂದೆ- ತಾಯಿ ಸಮಾನ ಎಂದು ಹೇಳಿದ್ದೇನೆ. ರಾಷ್ಟ್ರ ಮಟ್ಟದ ನಾಯಕರ ಮೇಲೆ ನಮಗೆ ವಿಶ್ವಾಸ ಇದೆ. ಪುನಃ ಯತ್ನಾಳ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಏನೇ ಆಗಲಿ, ಯತ್ನಾಳ ಅವರೂ ಸೇರಿದಂತೆ ನಾನು ಮತ್ತು ನಮ್ಮ ತಂಡದವರೆಲ್ಲ ಬಿಜೆಪಿಯಲ್ಲೇ ಇರುತ್ತೇವೆ. ನಾವು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ. ಮುಂದಿನ ಸಲ ನಮ್ಮದೇ ಸರ್ಕಾರ ತರಲು ಏನು ಬೇಕೋ ಅದನ್ನು ಮಾಡುತ್ತೇವೆ ಎಂದೂ ಹೇಳಿದರು.