ಬೆಂಗಳೂರು: ಕರ್ನಾಟಕದಲ್ಲಿ ಸ್ಥಿರಾಸ್ಥಿ ನೋಂದಣಿ ಮಾಡಿಸುವವರಿಗೆ ಕಂದಾಯ ಇಲಾಖೆ ಶಾಕ್ ನೀಡಲು ಸಜ್ಜಾಗಿದೆ. ಇದೂ ಗ್ಯಾರಂಟಿಗಳ ಫಲವೇ ಎಂದು ಜನ ಆಕ್ರೋಶ ವ್ಯಕ್ತಪಡಿಸುವಂತಾಗಿದೆ.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ ಸಂಕ್ರಾಂತಿ ಬಳಿಕ ಹಾಲಿನ ದರ ಏರಿಕೆ ಮಾಡುವ ಪ್ರಸ್ತಾವನೆಯೂ ಇದೆ. ಇದರ ನಡುವೆಯೇ ಈಗ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಶಾಕ್ ಎದುರಾಗಿದೆ.
ರಾಜ್ಯದಲ್ಲಿ ಮುಂದಿನ ತಿಂಗಳಿನಿಂದಲೇ ಸ್ಥಿರಾಸ್ತಿಗಳ ನೋಂದಣಿ ಶುಲ್ಕ ಹೆಚ್ಚಳ ಮಾಡಲು ಕಂದಾಯ ಇಲಾಖೆ ಸಿದ್ಧತೆ ನಡೆಸಿದೆ. ಈ ಬಗ್ಗೆ ಸ್ವತಃ ಕಂದಾಯ ಸಚಿವ ಕೃಷ್ಣಭೈರೇಗೌಡ ಸುಳಿವು ನೀಡಿದ್ದಾರೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಕೃಷ್ಣಭೈರೇಗೌಡ ಈ ಮಾಹಿತಿ ನೀಡಿದ್ದಾರೆ.
ಬಜೆಟ್ ಮಂಡನೆಗೆ ಮುನ್ನ ಸಿಎಂ ಸಿದ್ದರಾಮಯ್ಯ ಸಂಪನ್ಮೂಲ ಸಂಗ್ರಹಣೆ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಈ ವೇಳೆ ನಿರೀಕ್ಷಿಸಿದಷ್ಟು ಸಂಪನ್ಮೂಲ ಕ್ರೋಢೀಕರಣವಾಗಿಲ್ಲ ಎನ್ನುವುದು ತಿಳಿದುಬಂದಿತ್ತು. ಹೀಗಾಗಿ ಈಗ ಸಂಪನ್ಮೂಲ ಹೆಚ್ಚಳಕ್ಕೆ ನೋಂದಣಿ ದರ ಪರಿಷ್ಕರಣೆಗೆ ಮುಂದಾಗಿದೆ ಎನ್ನಲಾಗಿದೆ. ಮುಂದಿನ ತಿಂಗಳಿನಿಂದಲೇ ಪರಿಷ್ಕೃತ ಮಾರ್ಗಸೂಚಿ ಜಾರಿಗೆ ಬರಲಿದೆ.