ಮಾದಕ ದ್ರವ್ಯ ನಿಯಂತ್ರಣ ಘಟಕ (ಎನ್‌ಸಿಬಿ) ಮತ್ತು ಭಾರತೀಯ ನೌಕಾಪಡೆ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತಿನ ಆಳಸಮುದ್ರದಲ್ಲಿ ನೆರೆಯ ದೇಶದಿಂದ ಕಳ್ಳಸಾಗಣೆಯಾಗುತ್ತಿದ್ದ 2,000 ಕೋ.ರೂ.ವೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿವೆ.
ಇದು ಆಳಸಮುದ್ರದಲ್ಲಿ ಎನ್‌ಸಿಬಿ ಮತ್ತು ಭಾರತೀಯ ನೌಕಾಪಡೆ ನಡೆಸಿದ ಇಂತಹ ಮೊದಲ ಕಾರ್ಯಾಚರಣೆಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ವಶಪಡಿಸಿಕೊಂಡಿರುವ ಮಾದಕ ದ್ರವ್ಯಗಳಲ್ಲಿ 529 ಕೆ.ಜಿ.ಗಾಂಜಾ, 234 ಕೆ.ಜಿ.ಕ್ರಿಸ್ಟಲ್ ಮೆಥಾಮ್ಫೆಟಮೈನ್ ಮತ್ತು ಹೆರಾಯ್ನ್ ಸೇರಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಇವುಗಳ ಮೌಲ್ಯ 2,000 ಕೋ.ರೂ.ಗಳಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಎನ್‌ಸಿಬಿ, ಅತ್ಯುತ್ಕೃಷ್ಟ ಗುಣಮಟ್ಟದ ಈ ಮಾದಕ ದ್ರವ್ಯಗಳು ನೆರೆದೇಶದಲ್ಲಿಯ ಡ್ರಗ್ಸ್ ಮಾಫಿಯಾದಿಂದ ಕಳ್ಳಸಾಗಣೆಯಾಗುತ್ತಿದ್ದವು. ಈ ಮಾದಕ ದ್ರವ್ಯಗಳ ವಶವು ಈ ಮಾಫಿಯಾಕ್ಕೆ ಹಾಗೂ ಭಾರತ ಮತ್ತು ಇತರ ದೇಶಗಳಿಗೆ ಮಾದಕ ದ್ರವ್ಯಗಳ ಪೂರೈಕೆಗೆ ಸಮುದ್ರ ಮಾರ್ಗದ ಬಳಕೆಗೆ ಭಾರೀ ಹೊಡೆತವನ್ನು ನೀಡಿದೆ ಎಂದು ಹೇಳಿದೆ. ಸಮುದ್ರದ ಮೂಲಕ ಮಾದಕ ದ್ರವ್ಯಗಳ ಕಳ್ಳಸಾಗಣೆ ಕುರಿತು ತಾನು ಸಂಗ್ರಹಿಸಿದ್ದ ಮಾಹಿತಿಯನ್ನು ಎನ್‌ಸಿಬಿ ಭಾರತೀಯ ನೌಕಾಪಡೆಯ ಗುಪ್ತಚರ ಘಟಕದೊಂದಿಗೆ ಹಂಚಿಕೊಂಡಿತ್ತು ಎಂದೂ ಹೇಳಿಕೆಯು ತಿಳಿಸಿದೆ.