ಬೆಂಗಳೂರು: ಮೊನ್ನೆ ತಡರಾತ್ರಿ ನಿಧನರಾದ ಮಾಜಿ ಸಿಎಂ ಎಸ್ಎಂ ಕೃಷ್ಣ ಕೊನೆಯದಾಗಿ ಕರೆ ಮಾಡಿದ್ದು ಯಾರಿಗೆ ಯಾರ ಜೊತೆ ಮಾತನಾಡಿದರೆಂಬುದು ಈಗ ಬಹಿರಂಗವಾಗಿದೆ.
ಎಸ್ಎಂ ಕೃಷ್ಣ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೊನ್ನೆ ತಡರಾತ್ರಿ ಅವರಿಗೆ ಹೃದಯಾಘಾತವಾಗಿದ್ದು ಎಲ್ಲರನ್ನೂ ಬಿಟ್ಟು ಅಗಲಿದ್ದಾರೆ. ಇಂದು ಸೋಮನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರೀ ಗೌರವಗಳೊಂದಿಗೆ ನಡೆಯಲಿದೆ. ಇದಕ್ಕೆ ಸಾಕಷ್ಟು ಜನ ಗಣ್ಯರು ಆಗಮಿಸುತ್ತಿದ್ದಾರೆ.
ನಾಡು ಕಂಡ ಶ್ರೇಷ್ಠ ಸಿಎಂಗಳ ಸಾಲಿನಲ್ಲಿ ಎಸ್ಎಂ ಕೃಷ್ಣ ಕೂಡಾ ಒಬ್ಬರು. ಅವರು ಇತ್ತೀಚೆಗಿನ ದಿನಗಳಲ್ಲಿ ರಾಜಕೀಯದಿಂದ ಕೊಂಚ ದೂರವೇ ಉಳಿದಿದ್ದರು. ಆದರೂ ತಮ್ಮ ಆತ್ಮೀಯರ ಜೊತೆ ವೈಯಕ್ತಿಕವಾಗಿ ಕರೆ ಮಾಡಿ ಮಾತನಾಡಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದರಂತೆ.
ಇದೀಗ ತಮ್ಮ ಸಾವಿಗೆ ಮುನ್ನ ಎಸ್ಎಂಕೆ ಯಾರ ಜೊತೆಗೆ ಮಾತನಾಡಿದ್ದು ಎಂದು ಬಹಿರಂಗವಾಗಿದೆ. ಸಾವಿಗೆ ಮುನ್ನ ಕೊನೆಯದಾಗಿ ಅವರ ಕುಟುಂಬ ವೈದ್ಯ ಡಾ ವಿಕೆ ಶ್ರೀನಿವಾಸ್ ಅವರಿಗೆ ಕರೆ ಮಾಡಿದ್ದರಂತೆ. ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಏನೇ ವಿಚಾರವಿದ್ದರೂ ಎಸ್ಎಂಕೆ ಕರೆ ಮಾಡುತ್ತಿದ್ದರು. ಇದೀಗ ಕೊನೆಯ ಬಾರಿಗೂ ವೈದ್ಯರಿಗೆ ಕರೆ ಮಾಡಿ ಸಲಹೆ ಪಡೆದಿದ್ದರಂತೆ.