ಬೆಂಗಳೂರು: ಮೊನ್ನೆ ತಡರಾತ್ರಿ ಅಗಲಿದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ನೆರವೇರಲಿದೆ. ಅವರ ಚಿತೆಗೆ ಬೆಂಕಿ ಇಟ್ಟು ಅಂತಿಮ ವಿಧಿ ವಿಧಾನ ಮಾಡುವವರು ಯಾರು ಎಂದು ಈಗಾಗಲೇ ನಿರ್ಧಾರವಾಗಿದೆ.
ಎಸ್ಎಂ ಕೃಷ್ಣ ಅವರಿಗೆ ಗಂಡು ಮಕ್ಕಳಿಲ್ಲ. ಮಾಳವಿಕಾ ಮತ್ತು ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಮಾಳವಿಕಾ ಉದ್ಯಮಿ, ದಿವಂಗತ ಸಿದ್ಧಾರ್ಥ್ ಹೆಗ್ಡೆ ಪತ್ನಿ. ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡಾಗ ಎಸ್ಎಂ ಕೃಷ್ಣ ತೀರಾ ಕುಗ್ಗಿ ಹೋಗಿದ್ದರು.
ಹಿರಿಯ ಪುತ್ರಿ ಮಾಳವಿಕಾ ಪುತ್ರ ಅಮರ್ಥ್ಯ ಹೆಗ್ಡೆ. ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಪತಿಯೇ ಅಮರ್ಥ್ಯ ಹೆಗ್ಡೆ. ಈಗ ಎಸ್ಎಂ ಕೃಷ್ಣ ಅಂತಿಮ ವಿಧಿ ವಿಧಾನವನ್ನು ಮೊಮ್ಮಗ ಅಮರ್ಥ್ಯನೇ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಗಂಡು ಮಗನ ಸ್ಥಾನದಲ್ಲಿ ನಿಂತು ಅಮರ್ಥ್ಯನೇ ತಾತನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರಂತೆ.
ಇಂದು ಮದ್ದೂರು ತಾಲೂಕಿನ ಎಸ್ಎಂ ಕೃಷ್ಣ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದರ ಸಂಪೂರ್ಣ ಉಸ್ತುವಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ವಹಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಗೆ ಎಸ್ಎಂ ಕೃಷ್ಣ ರಾಜಕೀಯ ಗುರು ಕೂಡಾ. ಹೀಗಾಗಿ ಅವರನ್ನು ಗೌರವಯುತವಾಗಿ ಕಳುಹಿಸಿಕೊಡುವ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ.