ಮದ್ದೂರು: ತಮ್ಮ ರಾಜಕೀಯ ಗುರು ಎಸ್ಎಂ ಕೃಷ್ಣ ಸಾವು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ತೀರಾ ಕುಗ್ಗಿಸಿದೆ. ನಿನ್ನೆಯಿಂದ ಎಸ್ಎಂ ಕೃಷ್ಣ ಪಕ್ಕವೇ ಇದ್ದ ಡಿಕೆ ಶಿವಕುಮಾರ್ ಇಂದು ಅಂತಿಮ ಯಾತ್ರೆ ವೇಳೆಯೂ ಮೃತದೇಹ ಸಾಗಿಸುತ್ತಿರುವ ವಾಹನದಲ್ಲೇ ಸೋಫಾ ಮೇಲೆ ಕೂತು ಸಾಥ್ ನೀಡಿದ್ದಾರೆ.
ಎಸ್ಎಂ ಕೃಷ್ಣ ನನ್ನ ತಂದೆ ಸಮಾನರು. ಅವರನ್ನು ಗೌರವದಿಂದ ಕಳುಹಿಸಿಕೊಡುವುದು ನಮ್ಮ ಕರ್ತವ್ಯ ನಿನ್ನೆಯೇ ಡಿಕೆಶಿ ಹೇಳಿದ್ದರು. ಅದರಂತೆ ನಿನ್ನೆಯಿಂದ ಅವರ ಅಂತಿಮ ವಿಧಿ ವಿಧಾನ ನಡೆಸುವ ಎಲ್ಲಾ ಪ್ರಕ್ರಿಯೆಗಳ ಮೇಲ್ವಿಚಾರಣೆಯನ್ನು ತಾವೇ ಹೊತ್ತುಕೊಂಡಿದ್ದಾರೆ.
ಇಂದು ಬೆಂಗಳೂರಿನ ನಿವಾಸದಿಂದ ಹೊರಡುವ ಮುನ್ನ ಸ್ವಾಮೀಜಿಗಳ ನಿರ್ದೇಶನದಂತೆ ಎಸ್ಎಂಕೆ ಮೃತದೇಹಕ್ಕೆ ಪೂಜೆ ಮಾಡಿದ್ದರು. ಬಳಿಕ ಅಂತಿಮ ಯಾತ್ರೆಯ ವಾಹನದಲ್ಲಿ ವ್ಯವಸ್ಥೆ ಮಾಡಲಾಗಿರುವ ವಿಶೇಷ ಸೋಫಾ ಮೇಲೆ ಕುಳಿತು ಗುರುವಿನ ಜೊತೆಗೇ ತೆರಳಿದ್ದಾರೆ. ರಸ್ತೆಯಲ್ಲಿ ಸಾಕಷ್ಟು ಜನ ಸೇರಿದ್ದು, ಅವರನ್ನು ತೆರವುಗೊಳಿಸುತ್ತಾ ವಾಹನ ಸುಗಮವಾಗಿ ತೆರಳಲು ನಿರ್ದೇಶನವನ್ನೂ ನೀಡುತ್ತಿದ್ದುದು ಕಂಡುಬಂದಿದೆ.
ಇಂದು ಸಂಜೆ 3 ಗಂಟೆ ನಂತರ ಎಸ್ಎಂಕೆ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆ ಗಳೂ ನಡೆದಿವೆ. ಈ ವೇಳೆ ಸಾಕಷ್ಟು ರಾಜಕೀಯ ಗಣ್ಯರೂ ಭಾಗಿಯಾಗುವ ನಿರೀಕ್ಷೆಯಿದೆ. ಇದೀಗ ಅಂತಿಮ ಯಾತ್ರೆ ವೇಳೆಯೂ ಸಾಕಷ್ಟು ಸಂಖ್ಯೆಯಲ್ಲಿ ಜನ ಬಂದು ಅಂತಿಮ ದರ್ಶನ ಪಡೆದಿದ್ದಾರೆ.