ಮೈತ್ರಿ ಸರಕಾರದಲ್ಲಿ ಸಮನ್ವಯ ಕೊರತೆ, ಕೈ ಪಡೆ ಮುಖಂಡರ ಬಹಿರಂಗ ಕಚ್ಚಾಟದ ನಡುವೆಯೇ ಮಾಜಿ ಸಿಎಂ ಸಿದ್ದರಾಮಯ್ಯ ಮೈತ್ರಿ ಸರಕಾರದ ವಿರುದ್ಧ ಬಹಿರಂಗವಾಗಿ ಹೊಸ ಮಾಹಿತಿ ಸ್ಪೋಟಗೊಳಿಸಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದೇನೆ. ಆ ಸಂದರ್ಭದಲ್ಲಿ ಯಾವುದೇ ವಿಷಯದ ಕುರಿತು ಸ್ಪಷ್ಟವಾದ ನಿಲುವು ಪ್ರಕಟ ಮಾಡುತ್ತಿದ್ದೆ. ಅದಕ್ಕೆ ಬೆಲೆಯೂ ಸಿಗುತ್ತಿತ್ತು.
ಆದರೆ ಈಗ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷ ಮಾತ್ರ ಆಗಿದ್ದೇನೆ. ನನ್ನ ನಿರ್ಧಾರಗಳನ್ನು, ಮಾತನ್ನು ಯಾರೂ ಕೇಳುವ ಸನ್ನಿವೇಶದಲ್ಲಿ ಇಲ್ಲಾ. ಹೀಗಂತ ಸಿದ್ದರಾಮಯ್ಯ ಅಸಮಧಾನ ಹೊರಹಾಕಿದ್ದಾರೆ.
ವಿಜಯಪುರದ ಆಲಮಟ್ಟಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದೆ. ಆದರೆ ಆ ತಾಲೂಕುಗಳಿಗೆ ಈವರೆಗೆ ಕಚೇರಿ, ತಹಸೀಲ್ದಾರ್ ಯಾರನ್ನೂ ನೇಮಕ ಮಾಡಿಲ್ಲ. ಹೀಗಾಗಿ ನನ್ನ ಮಾತಿಗೆ ಬೆಲೆ ಇಲ್ಲ ಎಂದಿದ್ದಾರೆ.