Publish Date: Thu, 27 Nov 2025 (18:04 IST)
Updated Date: Thu, 27 Nov 2025 (18:07 IST)
ಮೈಸೂರು: ರಾಜ್ಯದಲ್ಲಿ ಕುಸ್ತಿ ತಿಕ್ಕಾಟದ ನಡುವೆ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಐದು ವರ್ಷವೂ ನನ್ನ ತಂದೆಯೇ ಸಿಎಂ ಎಂದಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕಾಳಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಈ ನಡುವೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ ತಂದೆಯ ಪರ ಬ್ಯಾಟಿಂಗ್ ಮಾಡಿದ್ದಾರೆ.
ತಂದೆಯವರು ಹೈಕಮಾಂಡ್ ನೀಡಿದ್ದ ಕೆಲಸವನ್ನು ಮಾಡಿದ್ದಾರೆ. ಅವರು ಯಾವುದೇ ಹಗರಣ ಮಾಡಿಲ್ಲ. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ. ಹೀಗಿರುವಾಗ ಅವರನ್ನು ಬದಲಾಯಿಸುವ ಪರಿಸ್ಥಿತಿ ನನಗೆ ಕಾಣುತ್ತಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯನವರಿಗೆ ಎಲ್ಲಾ ಶಾಸಕರ ಬೆಂಬಲವಿದೆ. ಅವರು ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಹೀಗಿರುವಾಗ ಅವರ ಬದಲಾವಣೆಗೆ ಒತ್ತಾಯಿಸುತ್ತಿರುವವರ ಬೇಡಿಕೆಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ.
ಹೈಕಮಾಂಡ್ ನಿರ್ಧರಿಸುವ ಮೊದಲು ನಾವು ಏನೋ ಹೇಳಿಕೆ ನೀಡುವುದು ಸರಿಯಲ್ಲ. ಹೈಕಮಾಂಡ್ ಸರಿಯಾದ ನಿರ್ಧಾರವನ್ನೇ ಕೈಗೊಳ್ಳಲಿದೆ. ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಅವರು ಹೇಳಿದ್ದಾರೆ.