Publish Date: Sat, 31 Jan 2026 (10:41 IST)
Updated Date: Sat, 31 Jan 2026 (10:46 IST)
ಬೆಂಗಳೂರು: ನಾಳೆ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ತೆರಿಗೆ ಹಂಚಿಕೆ ವಿಚಾರದಲ್ಲಿ ಅಸಮಾನತೆಯ ಆರೋಪ ಹೊರಿಸಿದ್ದಾರೆ.
ರಾಜ್ಯ ಸರ್ಕಾರ 16 ನೇ ಹಣಕಾಸು ಆಯೋಗದ ಮುಂದೆ ಮಂಡಿಸಿದ ಬೇಡಿಕೆಗಳಿಗೆ ಅನುಸಾರವಾಗಿ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಯುತ ತೆರಿಗೆ ಪಾಲು ಕೇಂದ್ರ ನೀಡಬೇಕು. ತೆರಿಗೆ ಪಾಲು, ಪ್ರಾಕೃತಿಕ ನಿಧಿ, ವಿಶೇಷ ಅನುದಾನಗಳನ್ನು ಸಮಾನವಾಗಿ ಹಂಚಿಕೆ ಮಾಡಿ ಒಕ್ಕೂಟಕ್ಕೆ ಮನ್ನಣೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಸಿಎಂ ಎಕ್ಸ್ ಖಾತೆಯಲ್ಲಿ ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ ಎಂಬ ಘೋಷವಾಕ್ಯದಡಿಯಲ್ಲಿ ಕೇಂದ್ರದ ಮೇಲೆ ಸಿಎಂ ಹಲವು ಆರೋಪ ಮತ್ತು ಬೇಡಿಕೆಗಳನ್ನಿಟ್ಟಿದ್ದಾರೆ. 2014ರಿಂದ ಈಚೆಗೆ ಆಡಳಿತ ನಡೆಸುತ್ತಿರುವ ಕೇಂದ್ರ ಸರ್ಕಾರವು ಅಳವಡಿಸಿಕೊಂಡ ನೀತಿಗಳಿಂದಾಗಿ ಸಂಪತ್ತು ಕೆಲವೇ ಜನರ ಬಳಿ ಕೇಂದ್ರೀಕೃತವಾಗುತ್ತಿದೆ. ಜಾಗತಿಕ ಅಸಮಾನತಾ ಸೂಚ್ಯಂಕದ ಅಧ್ಯಯನಗಳ ಪ್ರಕಾರ, ಶೇ 50ರಷ್ಟಿರುವ ಬಡ ಜನರು ಕೇವಲ ಶೇ 15ರಷ್ಟು ಆದಾಯ ಗಳಿಸುತ್ತಿದ್ದಾರೆ. ಶೇ 10ರಷ್ಟಿರುವ ಶ್ರೀಮಂತರು ಶೇ 58ಕ್ಕೂ ಹೆಚ್ಚಿನ ಆದಾಯ ಗಳಿಸುತ್ತಿದ್ದಾರೆ. ಈ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಅಳತೆ ಮಾಡಿ ಅದನ್ನು ಆದಾಯ ದೂರ ಎಂಬ ಸೂತ್ರಕ್ಕೆ ತಂದು ಅನುದಾನಗಳನ್ನು ಖೋತಾ ಮಾಡುವುದು ಅನ್ಯಾಯವಾಗುತ್ತದೆ ಎಂದು ಹೇಳಿದ್ದೇವೆ. ಕಲ್ಯಾಣ ಕರ್ನಾಟಕವೂ ಸೇರಿದಂತೆ ಕೆಲವು ಜಿಲ್ಲೆಗಳ ತಲಾ ಆದಾಯ ದೇಶದ ಸರಾಸರಿ ತಲಾ ಆದಾಯಕ್ಕಿಂತ ಕಡಿಮೆ ಇದೆ ಎಂಬುದನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಈ ಸೂತ್ರವನ್ನು ಶೇ 45ರ ಬದಲು ಶೇ 25ಕ್ಕೆ ಇಳಿಸಬೇಕು ಎನ್ನುವುದು ಕರ್ನಾಟಕದ ಒತ್ತಾಯ ಎಂದಿದ್ದಾರೆ.
ಇನ್ನೊಂದೆಡೆ ಎಚ್ ವಿಶ್ವನಾಥ್, ವಿಧಾನಪರಿಷತ್ ನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದು, ಜಿಎಸ್ ಟಿಯಲ್ಲಿ ಅನ್ಯಾಯವಾಗಿದೆ ಎಂದು ಬೊಬ್ಬೆ ಹೊಡೆಯುವ ಸಿದ್ದರಾಮಯ್ಯ ಎಷ್ಟು ಬಾರಿ ದಿಲ್ಲಿಯ ಜಿಎಸ್ ಟಿ ಕೌನ್ಸೆಲಿಂಗ್ ಸಭೆಗೆ ಹೋಗಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.