Publish Date: Thu, 29 Jan 2026 (14:48 IST)
Updated Date: Thu, 29 Jan 2026 (14:52 IST)
ಬೆಂಗಳೂರು: ನಿನ್ನೆಯಷ್ಟೇ ಇಹಲೋಕ ತ್ಯಜಿಸಿದ್ದ ಹಿರಿಯ ಹೋರಾಟಗಾರ ಅನಂತ ಸುಬ್ಬರಾವ್ ಅವರ ಅಂತಿಮ ದರ್ಶನವನ್ನು ಇಂದು ಸಿಎಂ ಸಿದ್ದರಾಮಯ್ಯ ಪಡೆದಿದ್ದಾರೆ.
ನಿನ್ನೆ ಸಂಜೆ ಅನಂತ ಸುಬ್ಬರಾವ್ ತಮ್ಮ ನಿವಾಸದಲ್ಲಿ ಹಠಾತ್ ಹೃದಯಸ್ತಂಬನಕ್ಕೊಳಗಾಗಿ ಮೃತಪಟ್ಟಿದ್ದರು. ಮನೆಯಲ್ಲಿ ಕುಸಿದು ಬಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಯಲ್ಲೇ ಕೊನೆಯುಸಿರೆಳೆದಿದ್ದರು.
ಇಂದು ಸಿಎಂ ಸಿದ್ದರಾಮಯ್ಯ, ಸಚಿವ ಸಂತೋಷ್ ಲಾಡ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಪ್ರಿಯಕೃಷ್ಣ ಜೊತೆಗೂಡಿ ಮೃತರ ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಸುದೀರ್ಘ ನಾಲ್ಕು ದಶಕಗಳ ಕಾಲ ಕಾರ್ಮಿಕ ಮುಖಂಡರಾಗಿ ಅನೇಕ ಚಳವಳಿಗಳನ್ನು ಮುನ್ನಡೆಸಿದ್ದ ಹೋರಾಟಗಾರ ಅನಂತ ಸುಬ್ಬರಾವ್ ನನಗೂ ಆತ್ಮೀಯರಾಗಿದ್ದರು. ಅವರ ದಣಿವರಿಯದ ಹೋರಾಟದ ಛಲ ಮತ್ತು ಸೈದ್ಧಾಂತಿಕ ಬದ್ಧತೆ ಹೋರಾಟಗಾರರಿಗೆ ಒಂದು ಮಾದರಿ. ಅವರ ನಿರ್ಗಮನದಿಂದ ಸಮಾಜಕ್ಕೆ, ಮುಖ್ಯವಾಗಿ ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.