ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿ ಮತ್ತು ಕಾರ್ಮಿಕ ಒಕ್ಕೂಟದ ಅಧ್ಯಕ್ಷ, ಹಿರಿಯ ಹೋರಾಟಗಾರ ಅನಂತ ಸುಬ್ಬರಾವ್ ಇನ್ನಿಲ್ಲ.
ಇಂದು ಸಂಜೆ ಸುಮಾರು 6 ಗಂಟೆಗೆ ಅವರು ವಿಜಯನಗರದ ನಿವಾಸದಲ್ಲಿ ಕುಸಿದು ಬಿದ್ದಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಸಂಜೆ ಸ್ನಾನ ಮಾಡಿ ಬಂದವರಿಗೆ ಉಸಿರಾಟದ ಸಮಸ್ಯೆ ಕಂಡುಬಂದಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ.
ಆದರೆ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ನಾಲ್ಕು ಸಾರಿಗೆ ನಿಗಮಗಳ ನೌಕರರ ವಿವಿಧ ಬೇಡಿಕೆ ಈಡೇರಿಕೆ ಒತ್ತಾಯಿಸಿ ನಾಳೆಯಿಂದ ಬೆಂಗಳೂರು ಚಲೋ ಹೋರಾಟಕ್ಕೆ ಕರೆ ನೀಡಲಾಗಿತ್ತು.
ಈ ಹೋರಾಟಕ್ಕೆ ಅವರು ಸಿದ್ಧತೆ ನಡೆಸುತ್ತಿದ್ದರು. ಸಂಜೆ ಕಾರ್ಮಿಕರೊಂದಿಗೆ ಸಭೆ ನಡೆಸಬೇಕಿತ್ತು. ಆದರೆ ಇದರ ನಡುವೆಯೇ ಅವರು ಕೊನೆಯುಸಿರೆಳೆದಿದ್ದಾರೆ. ಅನಂತ ಸುಬ್ಬರಾವ್ ನಿಧನದಿಂದಾಗಿ ನಾಳೆ ನಿಗದಿಯಾಗಿದ್ದ ಸಾರಿಗೆ ನೌಕರರ ಹೋರಾಟ ಮುಂದೂಡಲಾಗಿದೆ. ಅವರ ನಿಧನಕ್ಕೆ ರಾಜಕೀಯ ನಾಯಕರು, ಬೆಂಬಲಿಗರು ಸಂತಾಪ ವ್ಯಕ್ತಪಡಿಸಿದ್ದಾರೆ.