Select Your Language

Notifications

webdunia
webdunia
webdunia
webdunia

ಬಸ್ ಮುಷ್ಕರ ಹೇಗೆ ನಿಲ್ಲಿಸಬೇಕೆಂದು ನಿಮಗೆ ಗೊತ್ತಿಲ್ವಾ: ಸಿಟಿ ರವಿ

CT Ravi

Krishnaveni K

ಬೆಂಗಳೂರು , ಮಂಗಳವಾರ, 5 ಆಗಸ್ಟ್ 2025 (16:46 IST)
ಬೆಂಗಳೂರು: ಆಳುವ ಪಕ್ಷ ಕಾಂಗ್ರೆಸ್, ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಅಧಿಕಾರದಲ್ಲಿ ಇಲ್ಲದೆ ಇದ್ದಾಗ ಒತ್ತಡ ತಂತ್ರ, ಈಗ ನಿರ್ಲಕ್ಷ್ಯದ ಮನಸ್ಥಿತಿ- ಈ ಕಾರಣದಿಂದ ಸಾರಿಗೆ ಸಂಸ್ಥೆ ನೌಕರರು ಮುಷ್ಕರಕ್ಕೆ ಇಳಿದಿದ್ದಾರೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆರೋಪಿಸಿದ್ದಾರೆ.
 
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಧಿಕಾರದಲ್ಲಿ ಇಲ್ಲದಾಗ ವೀರಾವೇಶದ ಮಾತು; ಈಗ ದುರಹಂಕಾರದ ಮಾತು ಎಂದು ಟೀಕಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 26 ನೇ ತಿಂಗಳು ನಡೆಯುತ್ತಿದೆ. ನಿನ್ನೆ ಮೊನ್ನೆ ಅಧಿಕಾರಕ್ಕೆ ಬಂದವರ ಥರ ನೀವು ಮಾತನಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.
 
ಹಿಂದಿನ ಬಿಜೆಪಿ ಸರಕಾರದ ವಿರುದ್ಧ ವೃಥಾ ಆರೋಪ ಹೊರಿಸುವ ಷಡ್ಯಂತ್ರ ನಡೆಸುತ್ತಿದ್ದೀರಿ ಎಂದು ಟೀಕಿಸಿದರು. ನಿಮ್ಮದೇನು ಬದ್ಧತೆ? ನಿಮ್ಮ ಜವಾಬ್ದಾರಿ ಏನು? ಎಂದು ಕೇಳಿದರು. 12 ತಿಂಗಳ ಬಾಕಿ ಮಾತ್ರ ಬಿಜೆಪಿ ಸರಕಾರದ್ದು; ಕಳೆದ 26 ತಿಂಗಳ ಬಾಕಿ ನಿಮ್ಮ ಸರಕಾರದ ಅವಧಿಯದು ಎಂದು ನುಡಿದರು. ವೇತನ ಹಿಂಬಾಕಿ ಪಾವತಿಸಿ ಮುಷ್ಕರ ನಿಲ್ಲಿಸಲು ಸಕಾರಾತ್ಮಕ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.
 
ಮುಖ್ಯಮಂತ್ರಿಗಳು ಮಾತೆತ್ತಿದರೆ ಖಜಾನೆ ತುಂಬಿ ತುಳುಕುತ್ತಿದೆ ಎಂದು ಹೇಳುತ್ತಾರೆ. ಹಾಗಿದ್ದ ಮೇಲೆ ಸಾರಿಗೆ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಲು ಸಮಸ್ಯೆ ಏನಿದೆ ಎಂದು ಕೇಳಿದರು. ಬೇಡಿಕೆ ಈಡೇರಿಸಿ; ಇಲ್ಲವೇ ಪಾಪರ್ ಆಗಿದ್ದೇವೆ; ನಮ್ಮ ಬಳಿ ಬಿಡಿಗಾಸು ಇಲ್ಲ ಎಂದು ಒಪ್ಪಿಕೊಳ್ಳಿ ಎಂದು ಒತ್ತಾಯಿಸಿದರು. 
 
ನಷ್ಟಕ್ಕೆ ಕಂಡಕ್ಟರ್- ಡ್ರೈವರ್ ಕಾರಣರೇ?
4 ನಿಗಮಗಳು ನಷ್ಟದಲ್ಲಿವೆ ಎಂದಿದ್ದೀರಿ. ನಷ್ಟಕ್ಕೆ ಕಂಡಕ್ಟರ್- ಡ್ರೈವರ್ ಕಾರಣರೇ? ಖರೀದಿಯಲ್ಲಿ ಲೂಟಿ ಹೊಡೆಯುವವರು ಕಂಡಕ್ಟರ್ ಡ್ರೈವರ್‍ಗಳೇ? ಯಾರು ಕಾರಣ ಎಂದು ಸಿ.ಟಿ.ರವಿ ಅವರು ಕೇಳಿದರು. ಸಾರಿಗೆ ಸಚಿವ, ಎಂ.ಡಿ., ಕೆಎಸ್‍ಆರ್‍ಟಿಸಿ ಡಿಸಿ ಮಟ್ಟದ ಅಧಿಕಾರಿಗಳು, ಉಪಕರಣ ಖರೀದಿ ಮಾಡುವವರು ನಷ್ಟಕ್ಕೆ ಕಾರಣ. ಅವರೇ ಹೊಣೆ ಹೊತ್ತುಕೊಳ್ಳಬೇಕು ಎಂದು ತಿಳಿಸಿದರು.
 
ಕಷ್ಟಪಟ್ಟು ದುಡಿಯುವ ಕಂಡಕ್ಟರ್- ಡ್ರೈವರ್‍ಗಳನ್ನು ನೀವು ಜೀತದಾಳುಗಳ ಥರ ಮಾಡಿದ್ದೀರಿ ಎಂದು ಆಕ್ಷೇಪಿಸಿದರು. ಅವರನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಿ, ಅವರ ಬೇಡಿಕೆ ಈಡೇರಿಸಿ ಎಂದು ಆಗ್ರಹಿಸಿದರು. ಆಡಳಿತ ನಡೆಸುವ ಯೋಗ್ಯತೆ ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಿ ಎಂದು ಒತ್ತಾಯಿಸಿದರು. ನಾವು ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದರು.
 
ನಮಗೆ ಕೋವಿಡ್ ಸಂಕಷ್ಟ ಇತ್ತು..
ಉಳಿದ ಸರಕಾರಿ ನೌಕರರಿಗೆ ವೇತನ ಪರಿಷ್ಕರಿಸಿದ ಮಾದರಿಯಲ್ಲೇ ಇವರಿಗೂ ವೇತನ ಪರಿಷ್ಕರಿಸಿದರೆ ತಪ್ಪೇನಿದೆ ಎಂದು ಕೇಳಿದರು. ಒಬ್ಬರಿಗೊಂದು ನ್ಯಾಯ; ಇನ್ನೊಬ್ಬರಿಗೆ ಇನ್ನೊಂದು ಸರಿಯೇ ಎಂದು ಪ್ರಶ್ನಿಸಿದರು. ನಮಗೆ ಕೋವಿಡ್ ಸಂಕಷ್ಟ ಇತ್ತು. ನಿಮಗ್ಯಾವ ಸಂಕಷ್ಟ ಎಂದು ಪ್ರಶ್ನೆ ಮಾಡಿದರು.
ಗಣೇಶೋತ್ಸವದ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಪೊಲೀಸ್ ಕೇಸ್ ವಾಪಸ್ ಪಡೆಯುತ್ತೀರಿ; ಡಿಜೆ ಹಳ್ಳಿ, ಕೆಜಿ ಹಳ್ಳಿ ಊರು ಸುಟ್ಟವರ ಕೇಸ್ ವಾಪಸ್ ಪಡೆಯಲು ಶಿಫಾರಸು ಮಾಡುತ್ತೀರಿ. ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರ ಮೊಕದ್ದಮೆ ವಾಪಸ್ ಪಡೆಯುತ್ತೀರಿ. ನ್ಯಾಯಯುತ ಹೋರಾಟ ಮಾಡುತ್ತಿದ್ದ ಈ ನೌಕರರ ಮೇಲಿನ ಕೇಸ್ ಯಾಕೆ ವಾಪಸ್ ಪಡೆದಿಲ್ಲ ಎಂದು ಕೇಳಿದರು. ಮತಬ್ಯಾಂಕ್ ಬಗ್ಗೆ ಮಾತ್ರ ನಿಮ್ಮ ಕಳಕಳಿಯೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
 
ಬಿಜೆಪಿ ಸರಕಾರದಲ್ಲಿ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಶೇ 15ರಷ್ಟು ಮೂಲವೇತನ ಹೆಚ್ಚಿಸಲಾಗಿತ್ತು. ಅದೇರೀತಿ ಮೂಲವೇತನ ಹೆಚ್ಚಿಸಿ ಎಂದು ಆಗ್ರಹಿಸಿದರು. ಆಗ ಸಿದ್ದರಾಮಯ್ಯನವರು, ಈಗ ಡಿಸಿಎಂ ಆಗಿರುವವರು ಒತ್ತಾಯಿಸಿದ್ದರು. ಈಗ ತಾರತಮ್ಯ ಏಕೆ ಎಂದು ಕೇಳಿದರು.
 
ಬಡಪಾಯಿಗಳಿಗೇಕೆ ಸಂಯಮದ ಪಾಠ
ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿ ಮನೆಗೆ ಒಂದು ದಿನದ ಕಾಫಿ, ಟೀಗೆ 11 ಲಕ್ಷ ಖರ್ಚು ಮಾಡಿದ್ದಾರೆ. ಅದೇನು ವಿಶೇóಷ ಕಾಫಿಯೇ? ಎಂದ ಸಿ.ಟಿ.ರವಿ ಅವರು ಹೆಲಿಕಾಪ್ಟರ್ ಓಡಾಟ ಕಡಿಮೆ ಆಗಿಲ್ಲ; ಮಂತ್ರಿಗಳಿಗೆ ಹೊಸ ಕಾರು ಬಂದಿದೆ. ಬಡಪಾಯಿ ದುಡಿದು ತಿನ್ನುವ ಕೆ.ಎಸ್‍ಆರ್‍ಟಿಸಿ ನೌಕರರಿಗೇಕೆ ಸಂಯಮದ ಪಾಠ ಎಂದು ಕೇಳಿದರು.

ನಿಮ್ಮ ಮೂತಿ ನೋಡಿ ಜನರು ಬರುವುದಿಲ್ಲ; ಕಾಸು ಕೊಟ್ಟರಷ್ಟೇ ಬರುತ್ತಾರೆಂದು 300- 400 ರೂ. ಕೊಟ್ಟು ಒಂದೊಂದು ಸಮಾವೇಶಕ್ಕೆ ಕೋಟಿ ಕೋಟಿ ದುಡ್ಡು ಖರ್ಚು ಮಾಡಿದ್ದೀರಿ. ನಿಮಗಿಲ್ಲದ ಸಂಯಮದ ಪಾಠ ದುಡಿದು ತಿನ್ನುವಂಥ, ಜೀತದಾಳುಗಳಂತೆ ಕೆಲಸ ಮಾಡುವ ನೌಕರರಿಗೆ ಯಾಕೆ ಎಂದು ಕೇಳಿದರು. ನೀವು ಯಾವ ಖರ್ಚು ಉಳಿಸಿದ್ದೀರಿ ಎಂದು ಪ್ರಶ್ನಿಸಿದರು.
 
500 ಕೋಟಿಯ ಟಿಕೆಟ್ ಎಂದು ಪ್ರಚಾರ ತೆಗೆದುಕೊಳ್ಳುತ್ತೀರಿ. ಈಗ ನ್ಯಾಯಯುತ ಬೇಡಿಕೆ ಈಡೇರಿಸಲು ನಿಮಗೆ ಬರುವುದಿಲ್ಲವೇ ಎಂದು ಕೇಳಿದರು.
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಬಸ್ ಮುಷ್ಕರ: ಊರಿಗೆ ಹೋಗಲು ಬಸ್ ಬುಕಿಂಗ್ ಮಾಡಬಹುದೇ, ಕೆಎಸ್ ಆರ್ ಟಿಸಿ ಹೇಳಿದ್ದೇನು