ಬೆಂಗಳೂರು : ಭಾರತ ಹೊಸ ಇತಿಹಾಸ ನಿರ್ಮಿಸಿದೆ. ಶಶಿಯ ರಹಸ್ಯ ಬೇಧಿಸಲು 40 ದಿನದ ಹಿಂದೆ ನಭಕ್ಕೆ ಚಿಮ್ಮಿದ್ದ ಭಾರತದ ಚಂದ್ರಯಾನ 3 ನೌಕೆ ಚಂದಿರನ ದಕ್ಷಿಣ ಧ್ರುವದಲ್ಲಿ ಇಳಿದು ಜೈ ಹಿಂದ್ ಎಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಸ್ರೋಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಯುವ ಐತಿಹಾಸಿಕ ಕ್ಷಣಗಳನ್ನು ಕಣ್ತುಂಬಿಕೊಂಡೆ. ವಿಜ್ಞಾನಿಗಳ ದಶಕಗಳ ಪರಿಶ್ರಮವು ನನ್ನಂತ ಕೋಟ್ಯಂತರ ಭಾರತೀಯರ ಕನಸನ್ನು ನನಸಾಗಿಸಿದೆ. ಚಂದ್ರನ ಮೇಲೆ ಭಾರತದ ಪತಾಕೆ ಹಾರಿಸಿ ದೇಶವಾಸಿಗಳು ಹೆಮ್ಮೆಪಡುವಂತೆ ಮಾಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಇಡೀ ದೇಶವೇ ನಿರೀಕ್ಷೆ ಹೊಂದಿದ್ದ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಈ ಯೋಜನೆಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಹೃದಯಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.