"ನನ್ನ ವಿಚಾರವನ್ನು ಮಾತನಾಡಿಲ್ಲ ಅಂದರೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ನಿದ್ದೆ ಬರುವುದಿಲ್ಲ," ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು.
ರಾಮನಗರದ ಬಿಡದಿಯ ಕೇತುಗಾನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, "ಸುಳ್ಳು ಹೇಳುವುದಕ್ಕೂ ಒಂದು ಮಿತಿ ಇದೆ. ಜಾತಿಗಣತಿ ವಿಚಾರದಲ್ಲಿ ಸದನದಲ್ಲಿ ಸಿದ್ದರಾಮಯ್ಯನವರು ಮಾತನಾಡಬಹುದಿತ್ತು, ಯಾಕೆ ಸದನದಲ್ಲಿ ಮಾತನಾಡಲಿಲ್ಲ," ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
"ಸಿದ್ದರಾಮಯ್ಯನವರು ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ 10 ದಿನ ಏನೆಲ್ಲ ಚರ್ಚೆ ಮಾಡಿದ್ದಾರೆ ಅಂತಾ ನೋಡಿದ್ದೀರಿ, ಸದನದಲ್ಲಿ ಜನಗಣತಿ ವಿಚಾರವಾಗಿ ಚರ್ಚೆ ಮಾಡಿದ್ದರೆ, ನಾಡಿನ ಜನತೆಗೆ ಸತ್ಯ ಇಡಬಹುದಿತ್ತಲ್ವಾ. ಈ ವಿಚಾರವನ್ನು ಬೀದಿಯಲ್ಲಿ ಮಾತನಾಡುವುದು ಅವರ ಇಬ್ಬಗೆಯ ನೀತಿ ತೋರಿಸುತ್ತದೆ," ಅಂತಾ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.
ಕಾರ್ಯಾಗಾರದಲ್ಲಿ 123 ಅಭ್ಯರ್ಥಿಗಳ ಘೋಷಣೆ
"ಸೋಮವಾರದಿಂದ ರಾಮನಗರ ಜಿಲ್ಲೆ ಬಿಡದಿಯ ತೋಟದ ಮನೆಯಲ್ಲಿ 4 ದಿನಗಳ ಕಾಲ ಜೆಡಿಎಸ್ ಮಿಷನ್- 123 ಕಾರ್ಯಾಗಾರಕ್ಕೆ ಚಾಲನೆ ಸಿಗಲಿದೆ. ಕಾರ್ಯಾಗಾರದಲ್ಲಿ 123 ಜನ ಜೆಡಿಎಸ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗಲಿದೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
"123 ಜನರಿಗೆ ಗ್ರೀನ್ ಕಾರ್ಡ್ ವಿತರಣೆ ಮಾಡಲಿದ್ದು, ಮುಂದಿನ ಜನವರಿವರೆಗೆ ಆ ಅಭ್ಯರ್ಥಿಗಳ ಕಾರ್ಯವನ್ನು ವೀಕ್ಷಣೆ ಮಾಡಲಾಗುತ್ತದೆ. ನಂತರ ಅವರ ಕಾರ್ಯ, ಸಂಘಟನೆ ನೋಡಿ ಯೆಲ್ಲೋ, ರೆಡ್ ಕಾರ್ಡ್ ವಿತರಣೆ ಮಾಡಲಾಗುವುದು."
"ಈಗಾಗಲೇ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ತಯಾರಿ ಕಾರ್ಯ ಜೋರಾಗಿ ನಡೆಯುತ್ತಿದ್ದು, ರಾಜ್ಯದ ಎಲ್ಲಾ ಕ್ಷೇತ್ರದ ಜಿಲ್ಲಾಧ್ಯಕ್ಷರು, ಪ್ರಮುಖ ಮುಖಂಡರು ಭಾಗಿಯಾಗಲಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ಕೂಡ ಸಭೆಯಲ್ಲಿ ಭಾಗಿಯಾಗಿ ಮುಖಂಡರಿಗೆ ಮಾರ್ಗದರ್ಶನ ಮಾಡಲಿದ್ದಾರೆ."
"ದೇವೇಗೌಡರ ನೇತೃತ್ವದಲ್ಲೇ ಜೆಡಿಎಸ್ ಕಾರ್ಯಗಾರ ನಡೆಯಲಿದ್ದು, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಸೇರಿದಂತೆ ಪ್ರಮುಖ ಮುಖಂಡರು ಕಾರ್ಯಗಾರದಲ್ಲಿ ಭಾಗಿಯಾಲಿದ್ದಾರೆಂದು," ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.