Publish Date: Mon, 13 Sep 2021 (14:36 IST)
Updated Date: Mon, 13 Sep 2021 (14:38 IST)
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ನನಗೂ ರಾಜಕೀಯವಾಗಿ ವೈರತ್ವವೂ ಇದೆ, ಸ್ನೇಹವೂ ಇದೆ. ಆದರೆ ವೈಯಕ್ತಿಕವಾಗಿ ಅಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಅಗಲಿದ ಗಣ್ಯರಿಗೆ ಸಂತಾಪ ಸೂಚಿಸುವ ಸಂದರ್ಭದಲ್ಲಿ ಮಾತನಾಡುತ್ತಿದ್ದ ವೇಳೆ ಸಿದ್ದರಾಮಯ್ಯ ಧ್ವನಿ ಸರಿಯಾಗಿ ಕೇಳಿಸುತ್ತಿಲ್ಲ ಎಂಬ ವಿಚಾರವಾಗಿ ಸ್ಪೀಕರ್ ಕಾಗೇರಿ ಸಿದ್ದರಾಮಯ್ಯನವರ ಕಾಲೆಳೆದ ಪ್ರಸಂಗ ನಡೆಯಿತು. ಈಶ್ವರಪ್ಪನವರಿಗೆ ನಿಮ್ಮ ಧ್ವನಿ ಸರಿಯಾಗಿ ಕೇಳುತ್ತಿಲ್ಲವಂತೆ, ಮೈಕ್ ಸರಿಯಿಲ್ಲ ಎನ್ನುತ್ತಿದ್ದಾರೆ. ಅವರ ಮೇಲೆ ನಿಮಗೆ ಏನಾದರೂ ಸಿಟ್ಟಿದೆಯೇ ಎಂದು ಸ್ಪೀಕರ್ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈಶ್ವರಪ್ಪ ಹಾಗೂ ನನಗೂ ಲವ್ ಆಂಡ್ ಹೇಟ್ ಫ್ರೆಂಡ್ ಶಿಪ್. ವೈರನೂ ಇದೆ, ಸ್ನೇಹವೂ ಇದೆ. ಆದರೆ ರಾಜಕೀಯವಾಗಿ ಹೊರತು ವೈಯಕ್ತಿಕವಾಗಿ ಅಲ್ಲ ಎಂದು ಹೇಳಿದರು.