Select Your Language

Notifications

webdunia
webdunia
webdunia
webdunia

"ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್" : ಸಿಎಂ ಅಚ್ಚರಿ ಹೇಳಿಕೆ

webdunia
ಬೆಂಗಳೂರು , ಗುರುವಾರ, 9 ಸೆಪ್ಟಂಬರ್ 2021 (11:50 IST)
ಬೆಂಗಳೂರು, ಸೆ.9 : ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿರುವ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯವರೇ ಮೇಯರ್ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಕುತೂಹಲ ಕೆರಳಿಸಿದ್ದಾರೆ.

ಒಂದು ಕಡೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಮಹತ್ವ ಪಡೆದುಕೊಂಡಿದೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜೆಡಿಎಸ್ ಜತೆ ಪ್ರಾಥಮಿಕ ಹಂತದ ಮಾತುಕತೆ ನಡೆಸಿದ್ದೇವೆ. ಅವರಿಗೆ ಯಾವುದೇ ಕಾರಣಕ್ಕೂ ಮೇಯರ್ ಸ್ಥಾನವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಏನೇ ಆದರೂ ಬಿಜೆಪಿಯವರೇ ಮೇಯರ್ ಆಗುವುದು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಹೇಗೆ ಆಗುತ್ತಾರೆ ಎಂಬುದಕ್ಕೆ ನನ್ನ ಬಳಿ ಉತ್ತರ ಇಲ್ಲ. ಆದರೆ, ನಮ್ಮ ಪಕ್ಷದವರೇ ಮೇಯರ್ ಆಗುತ್ತಾರೆ. ಅಲ್ಲಿಯ ತನಕ ಕಾದು ನೋಡಿ ಎಂದು ಹೇಳಿದರು.
ದೆಹಲಿಗೆ ತೆರಳಿದ ವೇಳೆ ಅನೇಕ ಸಚಿವರನ್ನುಭೇಟಿಯಾಗಿದ್ದೇನೆ. ಬಹುತೇಕ ಎಲ್ಲಾ ಸಚಿವರ ಭೇಟಿಯು ಯಶಸ್ವಿಯಾಗಿದೆ. ರಾಜ್ಯದ ಯೋಜನೆಗಳ ಅನುಷ್ಠಾನ, ಅನುದಾನ ಬಿಡುಗಡೆ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಕೇಂದ್ರದಿಂದ ನಮಗೆ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಾಬಸ್ಪೇಟೆಯಿಂದ ಹೊಸೂರು ನಡುವಿನ ಉಪನಗರ ವರ್ತುಲ ರಸ್ತೆಯ ಕಾಮಗಾರಿ ಐದಾರು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಇದು ಕಳೆದ ಮೂರು ವರ್ಷಗಳಿಂದ ನೆನಗುದಿಗೆ ಬಿದ್ದಿತ್ತು. ನಿನ್ನೆ ಕೇಂದ್ರ ಸಚಿವ ನಿತಿನ್ಗಡ್ಕರಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಯೋಜನೆ ಪ್ರಾರಂಭಕ್ಕೆ ಅನುಮತಿ ಸಿಕ್ಕಿದೆ ಎಂದು ಹೇಳಿದರು.
ರಾಜ್ಯದ ನಾಲ್ಕೈದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೂ ಕೇಂದ್ರ ಅನುಮೋದನೆ ನೀಡಿದೆ. ಇದರಿಂದ ನಮಗೆ ಹೆಚ್ಚಿನ ಲಾಭವಾಗಲಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನೂ ಭೇಟಿ ಮಾಡಿದ್ದೆವು. ಗ್ರಾಮೀಣ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಎಂದು ಮಾಹಿತಿ ನೀಡಿದರು.
ಆಫ್ಟಿಕಲ್ ಫೈಬರ್ ಸೇವೆಯನ್ನು ವಿಸ್ತರಣೆ ಮಾಡಲು ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಮನವಿ ಮಾಡಲಾಗಿದ್ದು, ಗ್ರಾಮೀಣ ಡಿಜಿಟಲೈಜೇಷನ್ ಯೋಜನೆಯಡಿ ಅಗತ್ಯ ಸಹಕಾರ ನೀಡುವುದಾಗಿ ಅವರು ಭವರಸೆ ನೀಡಿದ್ದಾರೆ. ಜತೆಗೆ ಬೆಂಗಳೂರು-ಕೋಲಾರ ನಡುವೆ ಎಲೆಕ್ಟ್ರಾನಿಕ್ ಆರ್ಡ್ವೇರ್ ಮತ್ತು ಸಾಫ್ಟ್ವೇರ್ ಪಾರ್ಕ್ ನಿರ್ಮಿಸುವುದು, ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪನೆ, ಉಪನಗರ ರೈಲ್ವೆ ಸೇರಿದಂತೆ ಮತ್ತಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಆರೋಗ್ಯದ ಸ್ಥಿತಿ ಸರಿ ಇಲ್ಲದ ಕಾರಣ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಅದರಲ್ಲೂ ಸಂಪುಟ ವಿಸ್ತರಣೆ ಬಗ್ಗೆ ಮಾತುಕತೆಯೇ ನಡೆದಿಲ್ಲ. ಮುಂದಿನ ಬಾರಿ ದೆಹಲಿಗೆ ತೆರಳಿದ ವೇಳೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ನಡ್ಡಾ ಅವರು ಸೂಚನೆ ಕೊಟ್ಟಿದ್ದಾರೆ. ಸರ್ಕಾರದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರ ನಿರ್ದೇಶನದಂತೆ ಹಾಗೂ ರಾಜ್ಯಾಧ್ಯಕ್ಷರಾದ ನಳೀನ್ಕುಮಾರ್ ಕಟೀಲ್ ಅವರ ಮುಂದಾಳತ್ವದಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ ಎಂದರು.
ಕೇರಳದಲ್ಲಿ ಕಾಣಿಸಿಕೊಂಡಿರುವ ನಿಫಾ ವೈರಸ್ ಬಗ್ಗೆ ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ವಿಶೇಷವಾಗಿ ಗಡಿ ಜಿಲ್ಲೆಗಳಲ್ಲಿ ವ್ಯಾಪಕವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇವೆ. ಪ್ರತಿ ದಿನ ನೇರವಾಗಿ ನನಗೆ ವರದಿ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ಕೊಡಲಾಗಿದೆ. ಕೇರಳದಿಂದ ನಮಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಆ ನಿಟ್ಟಿನಲ್ಲಿ ನಾವು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ ಎಂದು ತಿಳಿಸಿದರು.


Share this Story:

Follow Webdunia kannada

ಮುಂದಿನ ಸುದ್ದಿ

ರೈಲು ವಿಳಂಬವಾದರೇ ಪ್ರಯಾಣಿಕರಿಗೆ ಪರಿಹಾರ ನೀಡಬೇಕು: ಸುಪ್ರೀಂ ಕೋರ್ಟ್