ನವದೆಹಲಿ : ಪ್ರತಿ ಪ್ರಯಾಣಿಕರ ಸಮಯವು "ಅಮೂಲ್ಯವಾದುದು" ಎಂದಿರುವ ಸುಪ್ರೀಂ ಕೋರ್ಟ್, ತನ್ನ ನಿಯಂತ್ರಣ ಮೀರಿ ರೈಲು ವಿಳಂಬವಾಗಿದೆ ಎಂದು ಸಾಬೀತುಪಡಿಸದ ಹೊರತು 'ವಿಳಂಬ ಮತ್ತು ತಡವಾಗಿ ಬರುವುದಕ್ಕೆ' ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಬುಧವಾರ ಮಹತ್ವದ ಆದೇಶ ಹೊರಡಿಸಿದೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ, ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ(ಎನ್ ಸಿಡಿಆರ್ ಸಿ) ತೀರ್ಪಿನ ವಿರುದ್ಧ ಉತ್ತರ ಪಶ್ಚಿಮ ರೈಲ್ವೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.
2016ರಲ್ಲಿ ಸಂಜಯ್ ಶುಕ್ಲಾ ಹಾಗೂ ಇತರ ಮೂವರು ಕುಟುಂಬಸ್ಥರ ಜೊತೆಗೆ ಜಮ್ಮುವಿಗೆ ಪ್ರಯಾಣ ಬೆಳೆಸುವ ವೇಳೆ ರೈಲು ನಾಲ್ಕು ಗಂಟೆ ವಿಳಂಬವಾಗಿದ್ದಕ್ಕೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಎನ್ ಸಿಡಿಆರ್ ಸಿ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಆದೇಶ ನೀಡಿತ್ತು. ಈಗ ಎನ್ ಸಿಡಿಆರ್ ಸಿ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ರೈಲು ವಿಳಂಬದಿಂದಾಗಿ ಕುಟುಂಬಸ್ಥರು ವಿಮಾನಯಾನ ತಪ್ಪಿಸಿಕೊಂಡರು. ಇದರಿಂದ ದುಬಾರಿ ಟ್ಯಾಕ್ಸಿ ಮೂಲಕ ಶ್ರೀನಗರಕ್ಕೆ ತೆರಳಬೇಕಾಗಿ ಬಂದಿತ್ತು. ವಿಮಾನಯಾನ ಮಿಸ್ ಆಗಿದ್ದು ಮಾತ್ರವಲ್ಲದೇ ದಾಲ್ ಸರೋವರದಲ್ಲಿ ದೋಣಿ ಬುಕ್ಕಿಂಗ್ ಮಾಡಿದ್ದು ಕೂಡ ವ್ಯರ್ಥವಾಗಿತ್ತು.
ಎನ್ ಸಿಡಿಆರ್ ಸಿ, ರೈಲ್ವೆ ಸೇವೆಯಲ್ಲಿ ವ್ಯತ್ಯಯ ಇದೆ ಎಂದು ಅಭಿಪ್ರಾಯಪಟ್ಟಿತ್ತು ಮತ್ತು ಪ್ರಯಾಣಿಕರಿಗೆ ಟ್ಯಾಕ್ಸಿ ವೆಚ್ಚ 15,000 ರೂ, ಬುಕ್ಕಿಂಗ್ ವೆಚ್ಚ 10000 ರೂ. ಹಾಗೂ ಮಾನಸಿಕ ಒತ್ತಡಕ್ಕೆ ಪರಿಹಾರವಾಗಿ 5 ಸಾವಿರ ರೂಪಾಯಿ ನೀಡುವಂತೆ ವಾಯುವ್ಯ ರೈಲ್ವೆ ಇಲಾಖೆಗೆ ಆದೇಶ ನೀಡಿತ್ತು.