Select Your Language

Notifications

webdunia
webdunia
webdunia
webdunia

ಅನ್ಯ ಧರ್ಮದವರಿಗೆ ಧಕ್ಕೆ ಬರಬಾರದು: ಈದ್ಗಾ ಮೈದಾನದಲ್ಲಿ ಗಣೇಶನ ಕೂರಿಸಲು ನೂರೆಂಟು ರೂಲ್ಸ್

Ganesha festival

Krishnaveni K

ಹುಬ್ಬಳ್ಳಿ , ಬುಧವಾರ, 4 ಸೆಪ್ಟಂಬರ್ 2024 (10:44 IST)
Photo Credit: Facebook
ಹುಬ್ಬಳ್ಳಿ: ಈ ಬಾರಿ ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶನ ಕೂರಿಸಲು ಸ್ಥಳೀಯಾಡಳಿತ ಒಪ್ಪಿಗೆ ನೀಡಿದೆ. ಆದರೆ ನೂರೆಂಟು ಷರತ್ತು ವಿಧಿಸಿದೆ. ಆ ಷರತ್ತುಗಳೇನು ಇಲ್ಲಿದೆ ವಿವರ.

ಪ್ರತೀ ಬಾರಿಯೂ ಇಲ್ಲಿ ಗಣೇಶನ ಕೂರಿಸುವುದಕ್ಕೆ ಹಿಂದೂ ಸಂಘಟನೆಗಳು ಜಟಾಪಟಿಯನ್ನೇ ನಡೆಸಬೇಕಾಗುತ್ತದೆ. ಈ ಬಾರಿ ಮಹಾನಗರ ಪಾಲಿಕೆ ಗಣೇಶನ ಕೂರಿಸಲು ಒಪ್ಪಿಗೆಯೇನೋ ನೀಡಿದೆ. ಆದರೆ ಕೆಲವೊಂದು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಪಾಲಿಸಿದರೆ ಮಾತ್ರ ಅವಕಾಶ ಎಂದಿದೆ.

ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 9 ರವರೆಗೆ ಮಾತ್ರ ಗಣೇಶನ ಕೂರಿಸಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 9 ರ ಮಧ್ಯಾಹ್ನ 12 ಗಂಟೆಯೊಳಗೆ ಮೂರ್ತಿ ವಿಸರ್ಜನೆ ಮಾಡಿರಬೇಕು. ಮೂರ್ತಿ ಪ್ರತಿಷ್ಠಾಪನೆಗೆ ಮುನ್ನ ಕಡ್ಡಾಯವಾಗಿ ಪಾಲಿಕೆ ಮತ್ತು ಪೊಲೀಸರ ಅನುಮತಿ ಪಡೆದಿರಬೇಕು. ಸೆ. 7ರಂದು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯೊಳಗಾಗಿ ಮೂರ್ತಿ ಪ್ರತಿಷ್ಠಾಪಿಸಿ ಸೆ.9 ರ ಮಧ್ಯಾಹ್ನ 12 ಗಂಟೆಯೊಳಗೆ ವಿಸರ್ಜನೆ ಮಾಡಬೇಕು.

ಇನ್ನು ಗಣೇಶನ ಮೂರ್ತಿ 30 ಅಡಿ ಉದ್ದ 30 ಅಡಿ ಅಗಲ ಮೀರಬಾರದು. ಪೊಲೀಸ್, ಪಾಲಿಕೆ ಅಥವಾ ಕಂದಾಯ ಇಲಾಖೆ ಸೂಚಿಸುವ ಜಾಗದಲ್ಲೇ ಪ್ರತಿಷ್ಠಾಪನೆ ಮಾಡಬೇಕು. ಅನುಮತಿ ಇರುವಷ್ಟು ಜಾಗದಲ್ಲಿ ಮಾತ್ರ ಪೆಂಡಾಲ್ ಹಾಕಬೇಕು. ಉತ್ಸವ ಮೂರ್ತಿಯ ಹೊರತು ಯಾವುದೇ ಭಾವುಟ, ಪ್ರಚೋದನಕಾರಿ ಫೋಟೋ, ಭಿತ್ತಿಪತ್ರ, ಬ್ಯಾನರ್ ಗಳಿಗೆ ಅವಕಾಶವಿಲ್ಲ. ಯಾವುದೇ ಪ್ರಚೋದನಕಾರೀ ಹಾಡು, ಡಿಜೆ ಸೌಂಡ್, ಧ್ವನಿ ವರ್ಧಕಗಳನ್ನುಬಳಸುವಂತಿಲ್ಲ.

ಸಾರ್ವಜನಿಕ ಗಣೇಶ ಉತ್ಸವ ಆಚರಣೆಗಾಗಿ ಪೆಂಡಾಲ್ ಗಳಲ್ಲಿ ವಾಣಿಜ್ಯ ಜಾಹೀರಾತು ಹಾಕಬಾರದು. ಕೋಮು ಸೌಹಾರ್ದತೆಯನ್ನು ಕಾಪಾಡಬೇಕು. ಗಲಾಟೆಗಳಿಗೆ ಆಸ್ಪದ ನೀಡಬಾರದು. ಪೊಲೀಸರು ಸೂಚಿಸದ ಸ್ಥಳದಲ್ಲಿ ಮೆರವಣಿಗೆ ಮಾಡಿ ಅವರು ಸೂಚಿಸಿದ ಸ್ಥಳದಲ್ಲೇ ಮೂರ್ತಿ ವಿಸರ್ಜನೆ ಮಾಡಬೇಕು.

ಸಮಾರಂಭ ಆಚರಿಸಿದ ಬಳಿಕ ಸ್ಥಳವನ್ನು ಸಂಪೂರ್ಣ ಸ್ವಚ್ಛ ಮಾಡಿ ಪಾಲಿಕೆ ಅಧಿಕಾರಿಗಳಿಗೆ ವರದಿ ನೀಡಬೇಕು. ಈದ್ಗಾ ಮೈದಾನದ ಸುತ್ತಮುತ್ತ ಪಟಾಕಿ ಹೊಡೆಯುವಂತಿಲ್ಲ. ಪ್ರಚೋದನಕಾರೀ ಭಾಷಣ ಮಾಡಬಾರದು. ಅನ್ಯ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವಂತಹ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ ಎಂದು ನೂರೆಂಟು ಷರತ್ತುಗಳನ್ನು ವಿಧಿಸಿ ಗಣೇಶನ ಕೂರಿಸಲು ಅನುಮತಿ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪ ಎಂಬ ಪಟ್ಟಕ್ಕೇ ಮಸಿ ಬಳಿದ ಪಾಪಿ: ಮಗಳನ್ನೇ ಗರ್ಭಿಣಿ ಮಾಡಿದ