ಬೆಂಗಳೂರು: ಇನ್ನೇನು ಗಣೇಶ ಹಬ್ಬಕ್ಕೆ ಕೆಲವೇ ದಿನ ಬಾಕಿಯಿದ್ದು, ಹಬ್ಬ ಆಚರಣೆ ಮಾಡುವವರಿಗೆ ಗೃಹಸಚಿವ ಜಿ ಪರಮೇಶ್ವರ್ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ.
ಗಣೇಶೋತ್ಸವ ಮೆರವಣಿಗೆ, ಸಂಭ್ರಮ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಂಡರೆ ಅಂತಹವರ ವಿರುದ್ಧ ಮುಲಾಜಿಲ್ಲದೇ ಕ್ರಮ ಕೈಗೊಳ್ಳುವುದಾಗಿ ಪರಮೇಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ. ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಕೆಲವೊಮ್ಮೆ ಅಹಿತಕರ ಘಟನೆಗಳು ನಡೆಯುತ್ತವೆ. ಅದಕ್ಕಾಗಿ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು. ಇಲ್ಲಿನ ಜನ ಪರಸ್ಪರ ಪ್ರೀತಿ, ವಿಶ್ವಾಸದಿಂದಿರುತ್ತಾರೆ ಎಂಬ ನಂಬಿಕೆಯಿದೆ. ಹಾಗಿದ್ದರೂ ಗಣೇಶೋತ್ಸವ ನೆಪ ಮಾಡಿಕೊಂಡು ಶಾಂತಿ ಕದಡಲು ಯತ್ನಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಕಳೆದ 1 ವರ್ಷಗಳಿಂದ ರಾಜ್ಯದಲ್ಲಿ ಕೋಮು ಗಲಭೆಗಳಾಗಲು ಗೃಹ ಇಲಾಖೆ ಅವಕಾಶ ಕೊಟ್ಟಿಲ್ಲ. ಇದಕ್ಕೆ ಸಹಕರಿಸಿದ ರಾಜ್ಯದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪ್ರಣಾಳಿಕೆಯಲ್ಲಿದ್ದಂತೇ ಶಾಂತಿ ಕಾಪಾಡಿದ್ದೇವೆ. ಇದು ಮುಂದೆಯೂ ಮುಂದುವರಿಯಬೇಕು ಎಂದು ಸಚಿವರು ಹೇಳಿದ್ದಾರೆ.