ಬೆಂಗಳೂರು: ರಸ್ತೆ ಗುಂಡಿಗಳನ್ನು ಮುಚ್ಚುವ ವಿಷಯದಲ್ಲಿ ಸರಕಾರ ಹಲವಾರು ಡೆಡ್‍ಲೈನ್ ಕೊಟ್ಟಿದೆ. ಡೆಡ್‍ಲೈನ್ ಸಾಯುತ್ತಿದೆಯೇ ಹೊರತು ಅಭಿವೃದ್ಧಿ ಆಗುತ್ತಿಲ್ಲ ಎಂದು ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆ ಅವರು ಟೀಕಿಸಿದ್ದಾರೆ.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬೆಂಗಳೂರಿನ ರಸ್ತೆಗಳಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಆರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವಿಗೆ ಯಾರು ಹೊಣೆ? ಮೃತರ ಕುಟುಂಬಕ್ಕೆ ಯಾರು ಜವಾಬ್ದಾರರು? ಎಂದ ಅವರು, ಇದರಲ್ಲಿ ಯಾರಿಗೂ ಜವಾಬ್ದಾರಿ ಇಲ್ಲ ಎಂದು ಟೀಕಿಸಿದರು.
ರಾಜ್ಯ ಸರಕಾರ, ಸಚಿವರು ಅತ್ಯಂತ ದುವ್ರ್ಯವಹಾರ ಮಾಡುತ್ತಿದ್ದಾರೆ. ಜನರ ಮೂಲಸೌಕರ್ಯಗಳ ವಿಚಾರದಲ್ಲಿ ಅವರಿಗೆ ಗೌರವ ಇಲ್ಲ; ಕೇವಲ ಹಣ ಮಾಡುವುದು, ಪ್ರಚಾರ ಪಡೆಯುವುದು, ಕುರ್ಚಿ ಹಿಡಿಯುವುದರ ಬಗ್ಗೆ ಚರ್ಚೆ ಆಗುತ್ತಿದೆ ಎಂದು ದೂರಿದರು.
ಸಚಿವರು ಜಿಲ್ಲೆಗಳಿಗೆ ಹೋಗುತ್ತಿಲ್ಲ; ಪ್ರಗತಿ ಪರಿಶೀಲನಾ ಸಭೆ ನಡೆಸುತ್ತಿಲ್ಲ. ಬೆಂಗಳೂರಿನ ಗುಂಡಿಗಳಿಂದ ಇಲ್ಲಿನ ನಾಗರಿಕರು, ಉದ್ಯೋಗಿಗಳು, ಉದ್ಯಮಿಗಳು – ಇವರೆಲ್ಲ ಬೇಸತ್ತಿದ್ದಾರೆ. ಇಲ್ಲಿ ಇರಬೇಕೇ ಬೇಡವೇ ಎಂದು ಉದ್ಯಮಿಗಳು ಯೋಚಿಸುವಂತಾಗಿದೆ. ಉದ್ಯಾನಗಳ ನಗರ ಬೆಂಗಳೂರು ಈಗ ಗುಂಡಿಗಳ ಬೆಂಗಳೂರಾಗಿದೆ ಎಂದು ಟೀಕಿಸಿದರು.
ಎಲ್ಲಿ ಕಸ ಹಾಕುತ್ತಾರೋ ಅಂಥವರ ಮನೆ ಮುಂದೆ ಜಿಬಿಎ ವತಿಯಿಂದ ಕಸ ಸುರಿಯುವ, ದಂಡ ಹಾಕುವ ಕೆಲಸ ನಡೆದಿದೆ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಯಾರು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲವೋ ಅಂಥವರು ಇಂಥ ದುಷ್ಕøತ್ಯ ಮಾಡುತ್ತಾರೆ. ಕಸ ಎತ್ತುವುದು, ವಿಂಗಡಿಸುವುದು, ಅದನ್ನು ಸಂಸ್ಕರಿಸುವ ಕೆಲಸದ ವಿಚಾರದಲ್ಲಿ ಯಾವ ಲಾಬಿ ನಡೆಯುತ್ತಿದೆ ಎಂದು ಗೊತ್ತಿಲ್ಲ ಎಂದು ಆಕ್ಷೇಪಿಸಿದರು.
ಇದರಿಂದ ಬೆಂಗಳೂರಿನ ಎಲ್ಲ ರಸ್ತೆಗಳಲ್ಲಿ ಕಸ ಬೀಳುತ್ತಿದೆ. ಕಸ ಸುರಿಯುವುದು, ದಂಡ ಹಾಕುವುದು ಪರಿಹಾರವೇ? ಎಂದು ಕೇಳಿದರು. ಕಸದ ಸಮಸ್ಯೆ ಬಗೆಹರಿಸಲು ಬೆಂಗಳೂರಿನಲ್ಲಿ ಸಚಿವರು, ಅಧಿಕಾರಿಗಳು ಯೋಚಿಸುತ್ತಿಲ್ಲ ಎಂದು ನುಡಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ಸಿನಲ್ಲಿ ಯಾರು ಮುಖ್ಯಮಂತ್ರಿ ಆಗುತ್ತಾರೆಂಬುದು ನಮ್ಮ ಪ್ರಶ್ನೆಯಲ್ಲ; ಕರ್ನಾಟಕದ ಅಭಿವೃದ್ಧಿ ಆಗಬೇಕು. ಗುಂಡಿಗಳನ್ನು ಮುಚ್ಚಬೇಕಿದೆ. ಅತಿವೃಷ್ಟಿಯಿಂದ ತೊಂದರೆಗೆ ಸಿಲುಕಿದವರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು. ಹೆಣ್ಮಕ್ಕಳ ಮೇಲಿನ ಅತ್ಯಾಚಾರ, ಅಪಹರಣದ ವಿರುದ್ಧ ಕ್ರಮ ಅಗತ್ಯವಿದೆ. ನಾಪತ್ತೆ ಆಗುವವರಿಗೆ ರಕ್ಷಣೆ ಸಿಗಬೇಕು. ನೂರಾರು ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದರ ಬಗ್ಗೆ ಗಮನಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.