ನವದೆಹಲಿ: ಇಂದು ರಾಜ್ಯೋತ್ಸವ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಕನ್ನಡದಲ್ಲೇ ಶುಭಾಶಯ ಕೋರಿದ್ದಾರೆ.
ಕನ್ನಡ ರಾಜ್ಯೋತ್ಸವ ನಿಮಿತ್ತ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಕನ್ನಡದಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಇಂದು, ನಾವು ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವಾಗ, ಕರ್ನಾಟಕದ ಜನರಿಗೆ ಪ್ರತೀಕವಾಗಿರುವ ಶ್ರೇಷ್ಠತೆ ಮತ್ತು ಶ್ರಮಶೀಲ ಸ್ವಭಾವವನ್ನು ನಾವು ಆಚರಿಸುತ್ತೇವೆ. ಸಾಹಿತ್ಯ, ಕಲೆ, ಸಂಗೀತ ಮತ್ತಿತರ ಕ್ಷೇತ್ರಗಳಲ್ಲಿ ಪ್ರತಿಫಲಿಸುವ ಕರ್ನಾಟಕದ ಶ್ರೀಮಂತ ಸಂಸ್ಕೃತಿಯನ್ನು ಸಹ ನಾವು ಆಚರಿಸುತ್ತೇವೆ. ಈ ರಾಜ್ಯವು ಜ್ಞಾನದಲ್ಲಿ ಅಡಗಿರುವ ಪ್ರಗತಿಯ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ರಾಜ್ಯದ ಜನರು ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಗೃಹಸಚಿವ ಅಮಿತ್ ಶಾ ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ಇಲ್ಲಿನ ಜನರು ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ. ರಾಜ್ಯವು ಸದಾ ಸಮೃದ್ಧಿ ಮತ್ತು ವೈಭವದೊಂದಿಗೆ ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಶುಭಾಶಯ ಕೋರಿದ್ದಾರೆ.