ಬೆಂಗಳೂರು: ಇಂದು ಕನ್ನಡ ರಾಜ್ಯೋತ್ಸವ ಸಂಭ್ರಮ. ಈ ದಿನದಂದು ಈ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಣೆ ಮಾಡಲಿದ್ದಾರೆ. ಇದು ಎಷ್ಟು ಗಂಟೆಗೆ, ಎಲ್ಲಿ ನಡೆಯಲಿದೆ ಇಲ್ಲಿದೆ ಮಾಹಿತಿ.
1956 ರಲ್ಲಿ ಮೈಸೂರು ಸಂಸ್ಥಾನವು ಕರ್ನಾಟಕವೆಂದು ರೂಪುಗೊಂಡಿದ್ದು ಇದೇ ದಿನ. ಈ ಕಾರಣಕ್ಕೆ ಪ್ರತೀ ವರ್ಷ ನವಂಬರ್ 1 ರಂದು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ. ದಸರಾ ನಾಡಹಬ್ಬವಾಗಿದ್ದರೆ, ರಾಜ್ಯೋತ್ಸವ ಕನ್ನಡದ ಹಬ್ಬವಾಗಿದೆ.
ಇನ್ನು, ಪ್ರತೀ ಬಾರಿಯಂತೆ ಈ ಬಾರಿಯೂ ಕನ್ನಡ ರಾಜ್ಯೋತ್ಸವ ನಿಮಿತ್ತ ಕನ್ನಡದ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ವಿವಿಧ ಕ್ಷೇತ್ರಗಳ ಒಟ್ಟು 70 ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ. ಅವರಿಗೆ ಇಂದು ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ವಿತರಿಸಲಿದ್ದಾರೆ.
ಇಂದು ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ಪ್ರಶಸ್ತಿ ವಿಜೇತರನ್ನು ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ. ನಟ ಪ್ರಕಾಶ್ ರಾಜ್, ಸೂಲಗಿತ್ತಿ ಈರಮ್ಮ, ಕೋಣಂದೂರು ಲಿಂಗಪ್ಪ, ರಹಮತ್ ತರೀಕೆರೆ ಸೇರಿದಂತೆ ಅನೇಕ ಸಾಧಕರನ್ನು ಇಂದು ಸಿಎಂ ಸನ್ಮಾನಿಸಲಿದ್ದಾರೆ.