ಉಡುಪಿ: ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಉಡುಪಿ ಕೃಷ್ಣನ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಪ್ರಧಾನಿ ಆಗಮನಕ್ಕೆ ಒಂದು ವಿಶೇಷತೆಯೂ ಇದೆ.
ನವಂಬರ್ 28 ರಂದು ಪ್ರಧಾನಿ ಮೋದಿ ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿಯಾದ ಬಳಿಕ ಮೋದಿ ಮೊದಲ ಬಾರಿಗೆ ಕೃಷ್ಣನ ನಗರಿಗೆ ಭೇಟಿ ನೀಡುತ್ತಿದ್ದಾರೆ. ಇದಕ್ಕೆ ಮೊದಲು ಕೆಲವು ವರ್ಷಗಳ ಹಿಂದೊಮ್ಮೆ ಅವರು ಉಡುಪಿಗೆ ಭೇಟಿ ನೀಡಿದ್ದರು.
ಉಡುಪಿಯಲ್ಲಿ ಲಕ್ಷ ಕಂಠ ಗೀತಾ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಕೃಷ್ಣಮಠಕ್ಕೆ ಆಗಮಿಸಲಿರುವ ಅವರು ದೇವರ ದರ್ಶನ ಪಡೆದು ಬಳಿಕ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಲಿದ್ದಾರೆ.
ಬಳಿಕ ಶ್ರೀ ಮಠ ಆಯೋಜಿಸುತ್ತಿರುವ ಲಕ್ಷ ಕಂಠ ಗಿತಾ ಪಾರಾಯಣದ ಸಮಾರಂಭದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಈಗಾಗಲೇ ಶ್ರೀ ಮಠದ ಲಕ್ಷ ಗೀತಾ ಯಜ್ಞದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಖುದ್ದಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.