ಬೆಂಗಳೂರಿಗರ ನೆಚ್ಚಿನ ವಾಯುವಿಹಾರಿ ಸ್ಥಳ,ಹಸಿರು ಸೀರೆ ಉಟ್ಟು ಪ್ರಶಾಂತ ವಾತಾವರಣದೊಂದಿಗೆ ಮನಸ್ಸಿಗೆ ನೆಮ್ಮದಿ ನೀಡುವ ಸುಂದರ ತಾಣವಾಗಿರುವ ಕಬ್ಬನ್ ಉದ್ಯಾನವನಕ್ಕೆ ಕೊಳಚೆ ನೀರು ಹರಿದು ಬರುತ್ತಿದೆ. ಇದರಿಂದ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸದಾ ಜನಜಂಗುಳಿ, ಟ್ರಾಫಿಕ್, ಹಾರ್ನ್ ಸದ್ದಿನಿಂದ ಕೂಡಿದ್ದ ಸಿಲಿಕಾನ್ ಮಂದಿಗೆ ಪ್ರಶಾಂತತೆಯ ವಾತವರಣ ನೀಡುವ ಕಬ್ಬನ್ ಪಾರ್ಕ್ನ ಸೌಂದರ್ಯವನ್ನು ಅಲ್ಲಿನ ಪ್ರವಾಸಿಗರೆ ಹಾಳು ಮಾಡುವಂತೆ ಕಾಣುತ್ತಿದೆ. ಇನ್ನೂ ಕಬ್ಬನ್ ಪಾರ್ಕ್ ಒಳಗೆ ಇರುವ ಸುಂದರ ಪ್ರದೇಶಗಳಿಗೆ ವಿವಿಧ ಕಡೆಯಿಂದ ಕೊಚ್ಚೆ ನೀರು ನುಗ್ಗಿದ್ದು ವಾಯುವಿಹಾರಿಗಳು ಮೂಗು ಮುಚ್ಚಿಕೊಂಡು ಹೆಜ್ಜೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ನಿರ್ಮಿಸಿರುವ ಕಲ್ಲಿನ ಸೇತುವೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಬಾಟಲ್ ಸೇರಿ ಕಟ್ಟಿಕೊಂಡು ಈ ಪ್ರದೇಶವೆಲ್ಲ ಗೆಬ್ಬೆದ್ದು ನಾರುತ್ತಿದೆ. ಇದೇ ನೀರು ಬಿದಿರು ಮೆಳೆಯ ಮಾರ್ಗವಾಗಿ ಕಮಲದ ಕೊಳ ಕೆರೆ ತಲುಪುತ್ತಿದೆ ಕೊಳ ಕೊಚ್ಚೆ ನೀರಾಗಿ ಪರಿವರ್ತನೆ ಗೊಂಡಿದೆ.
24 ಕೋಟಿ ವೆಚ್ಚದಲ್ಲಿ ಕಬ್ಬನ್ ಪಾರ್ಕ್ ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲಾಗಿದೆ. ಆದರೆ, ಈ ಕೊಳಚೆ ನೀರಿನ ಸಮಸ್ಯೆ ಮಾತ್ರ ಸರಿಪಡಿಸಿಲ್ಲ. ಬಿದಿರು ಮೆಳೆಯ ಸುತ್ತಮುತ್ತ ಕಟ್ಟಿಕೊಂಡಿರುವ ತ್ಯಾಜ್ಯ ನೀರಿನಿಂದ ಇಡೀ ಪರಿಸರ ದುರ್ನಾತದಿಂದ ಕೂಡಿದೆ ಎಂದು ವಾಯುವಿಹಾರಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ, ಸುಮಾರು ₹1.5 ಕೋಟಿ ವೆಚ್ಚದಲ್ಲಿ ಕಮಲದ ಕೊಳದ ಅಭಿವೃದ್ಧಿಯನ್ನು ಮಾಡಲಾಗಿದೆ ಆದರೆ, ಕೊಳದ ಹೂಳನ್ನೇ ತೆಗೆದಿಲ್ಲ. ಇದರ ಅಭಿವೃದ್ಧಿಯೂ ಆಗಿಲ್ಲ. ಜತೆಗೆ ಕೊಳಚೆ ನೀರು ಬರುತ್ತಿದ್ದು, ದುರ್ವಾಸನೆ ಬೀರುತ್ತಿದೆ. ವಾರಾಂತ್ಯದಲ್ಲಿ ನೂರಾರು ಜನ ಕುಟುಂಬ ಸಮೇತ ಆಗಮಿಸುತ್ತಿದ್ದು. ಪಾರ್ಕ್ ನಲ್ಲಿ ಕೊಳಚೆ ನೀರು ಹರಿಯುವುದರಿಂದ ಪಾರ್ಕ್ ನ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಾಗಿದೆ.
ಪಾರ್ಕ್ ಗೆ ಬರುವ ಕೊಳಚೆ ನೀರಿನ ಬಗ್ಗೆ ಹಲವು ಬಾರಿ ಅಧಿಕಾರಿಗಳು ಗಮನಕ್ಕೆ ತಂದರೂ ಶಾಶ್ವತ ಪರಿಹಾರ ದೊರೆತ್ತಿಲ್ಲ,ಇನ್ನಾದರು ಸಂಭಂದ ಪಟ್ಟ ಅಧಿಕಾರಿಗಳೂ ಎಚ್ಚೆತ್ತುಕೊಂಡು ಪರಿಹಾರ ಕಲ್ಪಿಸುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ.