ಬೆಂಗಳೂರು: ಮೊನ್ನೆಯಷ್ಟೇ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಸೀ ಬರ್ಡ್ ಬಸ್ ಅಗ್ನಿ ಅನಾಹುತವಾಗಿ 7 ಜನ ಸಜೀವ ದಹನವಾದ ಘಟನೆ ಜನರ ಮನಸ್ಸಿನಿಂದ ಮಾಸಿಲ್ಲ. ಆಗಲೇ ಇನ್ನೊಂದು ಸೀಬರ್ಡ್ ಬಸ್ ನ ಚಾಲಕನೊಬ್ಬನ ಅವಾಂತರ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಸೀಬರ್ಡ್ ಸಂಸ್ಥೆಯ ಬಸ್ ಚಾಲಕ ಕುಡಿದು ವಾಹನ ಚಲಾಯಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಬಸ್ ನಲ್ಲಿ 30 ಜನ ಪ್ರಯಾಣಿಕರಿದ್ದರು. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ನಿಮಿತ್ತ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ಈ ವೇಳೆ ಉಪ್ಪಾರಪೇಟೆ ಪೊಲೀಸರು ಸೀಬರ್ಡ್ ಬಸ್ ಚಾಲಕ ದಿನೇಶ್ ನನ್ನು ಡ್ರಿಂಕ್ ಆಂಡ್ ಡ್ರೈವ್ ಮಾಡುತ್ತಿರುವುದಾಗಿ ಪತ್ತೆ ಮಾಡಿದ್ದಾರೆ. ತಕ್ಷಣವೇ ಆತನಿಗೆ ಬಸ್ ಪಕ್ಕಕ್ಕೆ ನಿಲ್ಲಿಸಲು ಸೂಚಿಸಲಾಗಿದೆ. ಬಳಿಕ ಚಾಲಕ ದಿನೇಶ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಬಸ್ ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷತೆ ಕಾರಣಕ್ಕೆ ಕೆಳಗಿಳಿಸಿ ಬೇರೆ ಬಸ್ ವ್ಯವಸ್ಥೆ ಮಾಡಿಸಿ ಕಳುಹಿಸಲಾಗಿದೆ. ತಮ್ಮದೇ ಸಂಸ್ಥೆಯ ಬಸ್ ಬೆಂಕಿಗೆ ಆಹುತಿಯಾಗಿದ್ದರೂ ನಿರ್ಲ್ಯಕ್ಷತನ ತೋರಿದ ಚಾಲಕನ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.