ಬೆಂಗಳೂರು: ಆರ್ ಬಿಐ ಅಧಿಕಾರಿಗಳ ಸೋಗಿನಲ್ಲಿ ಎಟಿಎಂ ವಾಹನ ಅಡ್ಡಗಟ್ಟಿ 7.11 ಕೋಟಿ ರೂ. ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಎಷ್ಟು ಹಣ ಸಿಕ್ಕಿದೆ ಎಂಬ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ದರೋಡೆಕೋರರ ಪೈಕಿ ಇದೀಗ ಒಟ್ಟು ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ 8 ಮಂದಿ ಶಾಮೀಲಾಗಿದ್ದರು. ಈಗ ಉಳಿದ ಐವರು ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ. ಈಗಾಗಲೇ ಬಂಧಿತರಾಗಿರುವ ದರೋಡೆಕೋರರನ್ನು ತಮಿಳುನಾಡಿನಲ್ಲಿ ಸೆರೆಹಿಡಿಯಲಾಗಿತ್ತು.
ಘಟನೆ ನಡೆದ ಒಂದೂವರೆ ಗಂಟೆಗಳ ಬಳಿಕ ನಮಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ ನಾಕಾಬಂಧಿ ಅಳವಡಿಸಲಾಗಿತ್ತು. ದುಷ್ಕರ್ಮಿಗಳು ಒಂದೇ ವಾಹನ ಬಳಸಿರಲಿಲ್ಲ. ಹೀಗಾಗಿ ಅವರನ್ನು ಸೆರೆಹಿಡಿಯುವುದೂ ಕಷ್ಟವಾಗಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.
ಈಗಾಗಲೇ ಬಂಧಿತರಾಗಿರುವ ಆರೋಪಿಗಳಿಂದ 5.3 ಕೋಟಿ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಉಳಿದ ಆರೋಪಿಗಳಿಗಾಗಿ ತಮಿಳುನಾಡು, ಕೇರಳ, ಆಂಧ್ರದಲ್ಲಿ ಹುಡುಕಾಟ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.