ಬೆಂಗಳೂರು: ಮೂರು ಲಕ್ಷ ರೂ ಹಣ ಕಳುವಾಗಿದೆ ಎಂದು ದೂರು ನೀಡಿದ್ದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಪೊಲೀಸರ ಮರುಪ್ರಶ್ನೆಯೇ ಮುಳುವಾಗುವ ಹಾಗಿದೆ.
ತಮ್ಮ ಮನೆಯಿಂದ ಇತ್ತೀಚೆಗೆ 3 ಲಕ್ಷ ರೂ. ಹಣ ಕಳುವಾಗಿದೆ ಎಂದು ವಿಜಯಲಕ್ಷ್ಮಿ ಪರವಾಗಿ ಅವರ ಮ್ಯಾನೇಜರ್ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದುವರೆಗೆ ಹಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಆದರೆ ಹಣ ಯಾರು ಕಳವು ಮಾಡಿರಬಹುದು ಎಂಬುದರ ಬಗ್ಗೆ ಇದುವರೆಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.
ಇದೀಗ ಪೊಲೀಸರಿಗೆ ನಿಜವಾಗಿಯೂ ಹಣ ಕಳುವಾಗಿದೆಯೇ ಎಂಬ ಬಗ್ಗೆಯೇ ಅನುಮಾನ ಮೂಡಿದೆ. ಹೀಗಾಗಿ ಈಗ ಹಣದ ಮೂಲ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಅಷ್ಟು ಹಣ ಎಲ್ಲಿಂದ ಬಂತು? ಮನೆಯಲ್ಲಿ ಯಾಕೆ ಇಟ್ಟಿದ್ದಿರಿ ಎಂಬ ಬಗ್ಗೆ ವಿವರಣೆ ನೀಡುವಂತೆ ಕೋರಿದ್ದಾರೆ.
ಹಣ ಕಳುವಾಗಿದೆ ಎಂದು ದೂರು ನೀಡಿದ್ದ ವಿಜಯಲಕ್ಷ್ಮಿ ಈಗ ಹಣದ ಮೂಲ ಯಾವುದು ಎಂದು ಹೇಳುವ ಪರಿಸ್ಥಿತಿ ಎದುರಾಗಿದೆ. ಇದೀಗ ದೂರು ಕೊಡಲು ಹೋಗಿ ಇನ್ನೊಂದು ಸಮಸ್ಯೆಯನ್ನು ಮೈಮೇಲೆಳೆದುಕೊಂಡರೇ ಎಂಬ ಸಂಶಯ ಮೂಡಿದೆ.