ಮೈಸೂರು: ಪತಿ ದರ್ಶನ್ ಜೈಲಿನಲ್ಲಿದ್ದರೂ ಅವರಿಗೆ ಇಷ್ಟವಾಗುವ ಕೆಲಸ ಮಾಡುವುದನ್ನು ಮಾತ್ರ ಪತ್ನಿ ವಿಜಯಲಕ್ಷ್ಮಿ ಮರೆತಿಲ್ಲ. ಮೈಸೂರು ದಸರಾ ಆನೆ ಮಾವುತರ ಕುಟುಂಬಕ್ಕೆ ಖುದ್ದಾಗಿ ತಾವೇ ಕುಕ್ಕರ್ ನೀಡಿ ಊಟ ಹಾಕಿಸಿದ್ದಾರೆ.
ನಟ ದರ್ಶನ್ ಪ್ರಾಣಿಪ್ರಿಯ. ಅದರಲ್ಲೂ ಆನೆಗಳ ಮೇಲೆ ಅವರಿಗೆ ವಿಶೇಷ ಮಮಕಾರ. ಈ ಹಿಂದೆ ಅವರು ಆನೆ ದತ್ತು ತೆಗೆದುಕೊಂಡ ಉದಾಹರಣೆಯೂ ಇದೆ. ಈ ಹಿಂದೆ ಮೈಸೂರಿನ ಅರ್ಜುನ ಆನೆಗೆ ತಮ್ಮದೇ ಖರ್ಚಿನಲ್ಲಿ ಸಮಾಧಿ ನಿರ್ಮಾಣಕ್ಕೂ ಮುಂದೆ ಬಂದಿದ್ದರು.
ಇದೀಗ ಪತ್ನಿ ವಿಜಯಲಕ್ಷ್ಮಿ ಪತಿಗೆ ಇಷ್ಟವಾಗುವ ಕೆಲಸ ಮಾಡಿದ್ದಾರೆ. ದರ್ಶನ್ ಜೈಲಿನಲ್ಲಿರುವಾಗ ಇತ್ತ ವಿಜಯಲಕ್ಷ್ಮಿ ಮೈಸೂರಿನ ದಸರಾ ಆನೆಗಳನ್ನು ನೋಡಿಕೊಳ್ಳುವ ಮಾವುತರನ್ನು ಭೇಟಿ ಮಾಡಿದ್ದು, ಖುದ್ದಾಗಿ ತಾವೇ ಸುಮಾರು 60 ಮಾವುತರ ಕುಟುಂಬದವರಿಗೆ ಕುಕ್ಕರ್ ಕೊಟ್ಟು ಭರ್ಜರಿ ಊಟವನ್ನೂ ಹಾಕಿಸಿದ್ದಾರೆ.
ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರವರೆಗೆ ಮೈಸೂರಿನಲ್ಲಿ ದಸರಾ ಕಳೆಗಟ್ಟಲಿದೆ. ಅದಕ್ಕಾಗಿ ಈಗಾಗಲೇ 14 ಆನೆಗಳು ಅರಮನೆ ಆವರಣಕ್ಕೆ ಬಂದಿವೆ. ಇವುಗಳನ್ನು ನೋಡಿಕೊಳ್ಳುವ ಮಾವುತರನ್ನು ವಿಜಯಲಕ್ಷ್ಮಿ ಖುದ್ದಾಗಿ ಭೇಟಿ ಮಾಡಿದ್ದಾರೆ.