ಬೆಂಗಳೂರು: ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಪೊಲೀಸರು ಜನರಿಗೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಿದ್ದಾರೆ. ಅದರಂತೆ ಕೆಲವು ಪ್ರದೇಶಗಳಿಗೆ ನೋ ಎಂಟ್ರಿ ಎಂದಿದ್ದಾರೆ. ಹೊಸ ವರ್ಷದ ನಿಯಮಗಳೇನು ಇಲ್ಲಿದೆ ನೋಡಿ ವಿವರ.
ಇತ್ತೀಚೆಗಿನ ವರ್ಷಗಳಲ್ಲಿ ಹೊಸ ವರ್ಷಾಚರಣೆ ಎನ್ನುವುದು ಹದಿ ಹರೆಯದ ಯುವಕ-ಯುವತಿಯರಿಗೆ ಕುಡಿದು, ಕುಣಿದು ರಸ್ತೆಯಲ್ಲಿ ತೂರಾಡಲು ನೀಡುವ ಅವಕಾಶ ಎನ್ನುವಂತಾಗಿದೆ. ಕೆಲವೊಬ್ಬರ ವರ್ತನೆ ನಿಜಕ್ಕೂ ಎಲ್ಲೆ ಮೀರಿರುತ್ತದೆ. ಕುಡಿದ ಮತ್ತಿನಲ್ಲಿ ಎಷ್ಟೋ ಅಪರಾಧ ಚಟುವಟಿಕೆಗಳು ನಡೆಯುತ್ತವೆ.
ಇದೇ ಕಾರಣಕ್ಕೆ ಡಿಸೆಂಬರ್ 31 ರಂದು ಸಂಜೆ 6 ಗಂಟೆ ನಂತರ ನಗರದ ಪಾರ್ಕ್, ಕೆರೆ ಇರುವ ಪ್ರದೇಶಗಳಿಗೆ ಎಂಟ್ರಿ ಇರುವುದಿಲ್ಲ. ಹೊಸ ವರ್ಷಾಚರಣೆ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸುವುದಿದ್ದರೆ ಅದಕ್ಕೆ ಪೊಲೀಸರಿಂದ ಪೂರ್ವಾನುಮತಿ ಪಡೆದಿರಬೇಕು. ಪಬ್, ರೆಸ್ಟೋರೆಂಟ್ ಗಳಲ್ಲಿ ಅಗ್ನಿ, ವಿದ್ಯುತ್ ಸುರಕ್ಷತಾ ಕ್ರಮಗಳಿರಬೇಕು. ಸಂಭ್ರಮಾಚರಣೆ ನೆಪದಲ್ಲಿ ಡ್ರಗ್ಸ್ ಬಳಕೆಗೆ ಅವಕಾಶವಿಲ್ಲ. ತುರ್ತು ನಿರ್ಗಮ ದ್ವಾರಗಳು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಇನ್ನು ಕೆಲವು ಪ್ರಮುಖ ಫ್ಲೈ ಓವರ್ ಗಳಲ್ಲಿ ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಪ್ರವೇಶಕ್ಕೆ ನಿರ್ಬಂಧವಿರುತ್ತದೆ. ಇವುಗಳಲ್ಲಿ ಐಟಿಸಿ ಫ್ಲೈ ಓವರ್, ಬಾಣಸವಾಡಿ ಫ್ಲೈ ಓವರ್, ಹೆಣ್ಣೂರು ಫ್ಲೈ ಓವರ್, ಮಹದೇವಪುರ ಫ್ಲೈ ಓವರ್, ದೇವರಬೀಸನಹಳ್ಳಿ ಫ್ಲೈ ಓವರ್, ದೊಡ್ಡನೆಕ್ಕುಂದಿ ಫ್ಲೈ ಓವರ್, ಒಮ್ ಆರ್ ರೋಡ್ ಫ್ಲೈ ಓವರ್ ಪ್ರಮುಖವಾದುದು. ಡಿಸೆಂಬರ್ 31 ರಂದು ಸಂಜೆಯಿಂದ ಮರುದಿನ ಬೆಳಿಗ್ಗೆ 6 ಗಂಟೆಯವರೆಗೂ ಟ್ರಾಫಿಕ್ ಪೊಲೀಸರು ನಿರಂತರವಾಗಿ ಡ್ರಿಂಕ್ ಆಂಡ್ ಡ್ರೈವ್ ಟೆಸ್ಟ್ ಮಾಡಲಿದ್ದಾರೆ.