ಬೆಂಗಳೂರು: ಎಲ್ಲರೂ ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಹಿಡಿಶಾಪ ಹಾಕುತ್ತಿದ್ದರೆ ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಟ್ರಾಫಿಕ್ ಇರೋದು ಒಳ್ಳೇ ಸೂಚನೆ, ಇದು ಅಭಿವೃದ್ಧಿ ಸೂಚಿಸುತ್ತದೆ ಎಂದು ಹೊಸ ವಾದ ಮಂಡಿಸಿದ್ದಾರೆ.
ಬೆಂಗಳೂರಿನಲ್ಲಿ ಒಂದು ಕಿ.ಮೀ. ದಾರಿ ಸಾಗಬೇಕಾದರೂ ಅರ್ಧಗಂಟೆ ತೆಗೆದುಕೊಳ್ಳುವ ಕಾಲವಿದು. ಟ್ರಾಫಿಕ್ ಸಮಸ್ಯೆಗೆ ಸರ್ಕಾರ ಪರಿಹಾರ ಕಂಡುಕೊಳ್ಳಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಆದರೆ ಇದರ ನಡುವೆ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಈ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಬೆಂಗಳೂರಿನ ಶೇ.75.5 ಮಂದಿ ಕೆಲಸ ಮಾಡುವವರಾಗಿದ್ದಾರೆ. ನಾವು ಜಾಗತಿಕವಾಗಿ ನಾಲ್ಕನೇ ಸ್ಥಾನದಲ್ಲಿದ್ದೇವೆ. ಟ್ರಾಫಿಕ್ ಸಮಸ್ಯೆ ನಾವು ಬೆಳೆಯುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ. ಹೀಗಾಗಿ ಟ್ರಾಫಿಕ್ ಒಳ್ಳೆಯದೇ ಎಂದಿದ್ದಾರೆ.
ಬೆಂಗಳೂರಿನಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ. ಅದಕ್ಕೇ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ನಮ್ಮಲ್ಲಿ 1.2 ಕೋಟಿ ನೊಂದಾಯಿತ ವಾಹನಗಳಿವೆ. ಇದು ಅಭಿವೃದ್ಧಿಯ ಸೂಚಕ ಎಂದಿದ್ದಾರೆ. ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.