ಕೊರೊನಾ ಬಳಿಕ ಧೈರ್ಯದೊಂದಿಗೆ ಬಿಡುಗಡೆಯಾದ ಎರಡು ಸ್ಟಾರ್ ನಟರ ಸಿನಿಮಾಗಳು ಒಂದೇ ದಿನದಲ್ಲಿ 'ಟೆಲಿಗ್ರಾಮ್' ಲಿಂಕ್ ಮೂಲಕ ಲೀಕ್ ಆಗಿವೆ. ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ ನಲ್ಲಿ ಲೀಕ್ ಆದ ಬೆನ್ನಲ್ಲೇ ಸಿಐಡಿ ಸೈಬರ್ ಘಟಕದ ಪೊಲೀಸರು ದುಬೈನಲ್ಲಿರುವ ಟೆಲಿಗ್ರಾಮ್ ಆಪ್ ಮುಖ್ಯಸ್ಥರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಗೂ ಮುನ್ನವೇ ಕೋಟಿಗೊಬ್ಬ- 3 ಸಿನಿಮಾ ವೀಕ್ಷಿಸಲು ನಮ್ಮ ಚಾನೆಲ್ ಗೆ ಸಬ್‌ಸ್ಕ್ರೈಬ್ ಆಗಿ ಎಂಬ ಸಂದೇಶಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು. ಪೈರಸಿ ಸಂದೇಶಕ್ಕೆ ಹೆದರಿದ್ದ ಕೋಟಿಗೊಬ್ಬ - 3 ನಿರ್ಮಾಪಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ನೀಡಿದ್ದರು. ಪೈರಸಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ಕೋರಿದ್ದರು. ಈ ಕುರಿತ ದೂರನ್ನು ತನಿಖೆ ನಡೆಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ದೂರನ್ನು ಸಿಸಿಬಿ ಪೊಲೀಸರಿಗೆ ವರ್ಗಾಯಿಸಿದ್ದರು. ಇದರ ಜತೆಗೆ ಸಿಐಡಿ ಸೈಬರ್ ಘಟಕಕ್ಕೂ ದೂರು ನೀಡಲಾಗಿತ್ತು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು.