ಬೆಂಗಳೂರು: ಉತ್ತರ ಕರ್ನಾಟಕದ ಭಾಗದ ಜನರಿಗೆ ಅನುಕೂಲ ಆಗುವ ದೃಷ್ಟಿಯಿಂದ ಒಂದು ಹೆರಿಗೆ ಆಸ್ಪತ್ರೆ ಕಟ್ಟಿಕೊಡಿ ಎಂದರೆ ಮಹಿಳಾ ಪತ್ರಕರ್ತರು ಪ್ರಶ್ನೆ ಮಾಡಿದರೆ ನಿಮ್ಮ ಹೆರಿಗೆ ಆಗ್ಲಿ ಎಂದು ಸಚಿವ ಆರ್ ವಿ ದೇಶಪಾಂಡೆ ಉಡಾಫೆಯ ಉತ್ತರ ಕೊಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ ಎಂದು ಜನ ಬಹಳ ದಿನಗಳಿಂದಲೂ ಬೇಡಿಕೆಯಿಡುತ್ತಲೇ ಇದ್ದಾರೆ. ಆದರೆ ಇದುವರೆಗೆ ಇಲ್ಲಿ ಸುಸಜ್ಜಿತ ಹೆರಿಗೆ ಆಸ್ಪತ್ರೆ ಕೂಡಾ ಇಲ್ಲ. ಇದರಿಂದ ಸಾಕಷ್ಟು ಜನ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.
ಹೀಗಾಗಿ ಇದೇ ಭಾಗದ ಶಾಸಕರೂ ಆಗಿರುವ ಕಾಂಗ್ರೆಸ್ ಹಿರಿಯ ನಾಯಕ ಆರ್ ವಿ ದೇಶಪಾಂಡೆಗೆ ಹಿರಿಯ ಪತ್ರಕರ್ತರೊಬ್ಬರು ನಿಮ್ಮ ಅವಧಿಯಲ್ಲಿ ಒಂದು ಹೆರಿಗೆ ಆಸ್ಪತ್ರೆ ಮಾಡಿಸಿ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಇದಕ್ಕೆ ಜವಾಬ್ಧಾರಿಯುತ ಉತ್ತರ ಕೊಡುವುದು ಬಿಟ್ಟು ನಿನ್ನದೇನು ಹೆರಿಗೆ ಇದ್ರೆ ಹೇಳು, ಮಾಡಿಸ್ತೀನಿ ಎಂದು ಉಡಾಫೆಯ ಮಾತನಾಡಿದ್ದಾರೆ. ಅವರ ಹೇಳಿಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದು ಮಹಿಳೆಯರಿಗೇ ಮಾಡಿದ ಅವಮಾನ ಎಂದು ಕೆಲವರು ಹೇಳಿದರೆ ಉತ್ತರ ಕರ್ನಾಟಕ ಭಾಗದ ಜನರ ಪರಿಸ್ಥಿತಿ ಬಗ್ಗೆ ಪ್ರಶ್ನೆ ಎತ್ತಿದರೆ ಅದರ ಗಾಂಭೀರ್ಯತೆಯೇ ಇಲ್ಲದೆ ಉತ್ತರ ಕೊಟ್ಟಿರುವುದು ಒಬ್ಬ ಹಿರಿಯ ನಾಯಕನಿಗೆ ಶೋಭೆ ತರುತ್ತದಾ ಎಂಬ ಪ್ರಶ್ನೆ ಮೂಡಿಸಿದೆ.