ಬಾದಾಮಿ : ಆರ್ ಎಸ್ ಎಸ್, ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ, ತಾಲಿಬಾನಿಗಳಿಗೆ ಹೇಗೆ ಮನುಷ್ಯತ್ವ, ಸಂಸ್ಕೃತಿ ಇಲ್ಲವೋ ಅದೇ ರೀತಿ ಆರ್ ಎಸ್ ಎಸ್, ಬಿಜೆಪಿಯವರು ಕೂಡ ತಾಲಿಬಾನಿಗಳಂತೆ ವರ್ತಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟು ಟೀಕೆ ಮಾಡಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕ ಸಿ ಟಿ ರವಿಯವರ ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ, ಸಂವಿಧಾನದಲ್ಲಿ ಯಾರಿಗೆ ನಂಬಿಕೆ ಇಲ್ಲವೋ ಅವರನ್ನು ತಾಲಿಬಾನಿಗಳೆಂದು ಕರೆಯುತ್ತಾರೆ, ಬಿಜೆಪಿ, ಆರ್ ಎಸ್ ಎಸ್ ನವರಿಗೆ ದೇಶದ ಪ್ರಜಾಪ್ರಭುತ್ವ ಮೇಲೆ ನಂಬಿಕೆಯಿದೆಯೇ ಹೀಗಾಗಿ ಅವರನ್ನು ಕೂಡ ತಾಲಿಬಾನ್ ಸಂಸ್ಕೃತಿಯವರು ಎಂದು ಕರೆಯುತ್ತೇವೆ ಎಂದರು.
ಆರ್ಎಸ್ಎಸ್ ಇಲ್ಲದಿದ್ರೆ ಸಿದ್ದರಾಮಯ್ಯ ಪಂಚೆ ಅಷ್ಟೇ ಅಲ್ಲ, ಅವರೂ ನೇತಾಡುತ್ತಿದ್ದರು ಎಂದು ಸಿ.ಟಿ.ರವಿ ಹೇಳಿಕೆ ವಿಚಾರವಾಗಿ ಸುದ್ದಿಗಾರರು ಸಿದ್ದರಾಮಯ್ಯನವರಲ್ಲಿ ಕೇಳಿದಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಶಾಸಕ ಸಿ.ಟಿ.ರವಿಯಿಂದ ದೇಶಭಕ್ತಿ ಪಾಠ ಕಲಿಯಬೇಕಾ?'. 'ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದು ಆರ್ಎಸ್ಎಸ್ನವರಿಂದ್ಲಾ?'. 'ಸ್ವಾತಂತ್ರ್ಯ ಸಿಕ್ಕಿದ್ದು ಗಾಂಧೀಜಿ, ತಿಲಕ್, ನೆಹರು ಅವರಿಂದ'. 'ಏನು ಗೋಡ್ಸೆಯಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆಯಾ?'. 'ಸಾವರ್ಕರ್ ಅವರಿಂದ ಸ್ವಾತಂತ್ರ್ಯ ಬಂದಿದೆಯಾ? 'ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ ಪಾಪ ಮಾತಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ, ಆರ್ ಎಸ್ ಎಸ್ ನವರು ಒಬ್ಬರಾದರೂ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತಿದ್ದರೇ, ಒಮ್ಮೆ ಬಿಜೆಪಿಯವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.