Select Your Language

Notifications

webdunia
webdunia
webdunia
webdunia

ಶೀಘ್ರವಾಗಿ ನಂದಿ ಬೆಟ್ಟದಲ್ಲಿ ರೋಪ್ ವೇ

ಶೀಘ್ರವಾಗಿ  ನಂದಿ ಬೆಟ್ಟದಲ್ಲಿ ರೋಪ್ ವೇ
ಬೆಂಗಳೂರು , ಬುಧವಾರ, 2 ಫೆಬ್ರವರಿ 2022 (15:24 IST)
ನಂದಿಬೆಟ್ಟದಲ್ಲಿ ತಾಂತ್ರಿಕ ಕಾರಣಗಳಿಂದಾಗಿ ರೋಪ್ ವೇ ಯೋಜನೆ ನನೆಗುದಿಗೆ ಬಿದ್ದಿದ್ದು, ಶೀಘ್ರವೇ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಹೇಳಿದರು.
ಬುಧವಾರ ನಂದಿಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಪ್ ವೇ ಯೋಜನೆಗೆ ಸಂಬಂಧಿಸಿದಂತೆ ತಿಂಗಳಾಂತ್ಯಕ್ಕೆ ಟೆಂಡರ್ ಆಹ್ವಾನಿಸಲಾಗುವುದು. ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
 
ಚಿಕ್ಕಬಳ್ಳಾಪುರ ತಾಲೂಕಿನಲ್ಲಿರುವ ನಂದಿ ಬೆಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಸಾವಿರಾರು ಮಂದಿ ಪ್ರವಾಸಿಗರು ಪ್ರತಿನಿತ್ಯ ಭೇಟಿ ಕೊಡುತ್ತಾರೆ. ಇಲ್ಲಿ ಯಾವುದೇ ಮೂಲಸೌಕರ್ಯಕ್ಕೆ ಕೊರತೆಯಾಗದಂತೆ ಕ್ರಮವಹಿಸಲಾಗುತ್ತದೆ. ಶೌಚಾಲಯ ಮತ್ತು ಕುಡಿಯುವ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿದ್ದು, ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಅವರು ಹೇಳಿದರು.
 
ಇಲ್ಲಿಗೆ ಬರುವ ಪ್ರವಾಸಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಜತೆಗೆ ಇಲ್ಲಿನ ಕಲೆ ಬಗ್ಗೆ ತಿಳಿಸುವ ನಿಟ್ಟಿನಲ್ಲಿ 'ಕಲಾಧಾಮ' ಎಂಬ ಚಟುವಟಿಕೆ ಆರಂಭಿಸುವ ಬಗ್ಗೆ ಚಿಂತಿಸಲಾಗಿದೆ. ಇದರಿಂದಾಗಿ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಹಾಗೂ ಉದ್ಯೋಗ ದೊರಕಿಸಿಕೊಟ್ಟಂತಾಗುತ್ತದೆ. ಅಲ್ಲದೆ, ವೃದ್ಧರು ಹಾಗೂ ವಿಕಲಚೇತನರಿಗೆ ಬೆಟ್ಟದ ಸೌಂದರ್ಯ ಸವಿಯಲು ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಆನಂದ್ ಸಿಂಗ್ ತಿಳಿಸಿದರು.
 
ಮನಸೋ ಇಚ್ಛೆ ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕ ಪಡೆಯಲಾಗುತ್ತದೆ ಎಂದು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಶುಲ್ಕ ಕಡಿಮೆ ಮಾಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಇದೇ ವೇಳೆ ಭರವಸೆ ನೀಡಿದರು.
 
ಮೂಲಭೂತ ಸೌಕರ್ಯದಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಆನಂದ್ ಸಿಂಗ್, ಪಾರ್ಕಿಂಗ್, ಉದ್ಯಾನವನ, ಮಕ್ಕಳ ಪಾರ್ಕ್ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
 
ನಂದಿಬೆಟ್ಟವನ್ನು ಅಂತರ್‌ರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪುಗೊಳಿಸಬೇಕಿದೆ. ಈ ತಾಣವು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 30 ಕಿ.ಮೀ. ದೂರದಲ್ಲಿದೆ. ಬೆಂಗಳೂರು ನಗರದಿಂದ ಒಂದು ಗಂಟೆಯಲ್ಲಿ ಬರಬಹುದು. ಈ ಪ್ರದೇಶವನ್ನು ಅಭಿವೃದ್ಧಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಕಡಿದರೆ ಕ್ರಿಮಿನಲ್ ಕೇಸ್ ಹುಷಾರ್