ಬೆಂಗಳೂರು: ಅಂಡ್ಜೇಸ್ಟ್‌ಮೆಂಟ್ ರಾಜಕಾರಣ ಹಾಗೂ ತಮ್ಮ ಹರಕು ಬಾಯಿಯಿಂದ ಇಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಲಿಪಶುವಾಗಿದ್ದಾರೆ ಎಂದು ಬಿಜೆಪಿ ನಾಯಕ ರೇಣುಕಾಚಾರ್ಯ ಕಿಡಿಕಾರಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಡ್ಜೇಸ್ಟ್‌ಮೆಂಟ್ ರಾಜಕಾರಣದ ಬಗ್ಗೆ ಮಾತನಾಡಿರುವ ಯತ್ನಾಳ್ ಅವರೇ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ 9200ಕ್ಕೂ ಅಧಿಕ ಮತಗಳು ಹೇಗೆ ಬಂತು. ಇದಕ್ಕೆ ಹೇಳುವುದು ಅಂಡ್ಜೇಸ್ಟ್‌ಮೆಂಟ್ ರಾಜಕಾರಣ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಕಾರಣನೇ ಯತ್ನಾಳ್ ಅವರು ಎಂದು ಆರೋಪ ಮಾಡಿದರು.
ಅಂಡ್ಜೇಸ್ಟ್‌ಮೆಂಟ್ ರಾಜಕಾರಣ ಹಾಗೂ ಹರಕು ಬಾಯಿಯಿಂದ ಯತ್ನಾಳ್ ಬಲಿಪಶುವಾಗಿದ್ದಾರೆ. ಅನಗತ್ಯವಾಗಿ ಟೀಕೆಗಳನ್ನು ಮಾಡಿದರು. ನಾನು ಈ ಹಿಂದೆ ಹೇಳಿದಂತೆ ಯತ್ನಾಳ್ ಅವರು ಬಲಿಪಶುವಾಗಿದ್ದಾರೆ ಎಂದರು.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಅವರನ್ನು ಟೀಕೆ ಮಾಡಿದರು. ಅದಲ್ಲದೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡರು. ಅಧಿವೇಶನದಲ್ಲಿ ₹2ಸಾವಿರ ಕೋಟಿ ಎಂದು ಹೇಳಿ, ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರಧಾರಿ, ಸೂತ್ರದಾರಿಯಾದರು ಎಂದರು.
ಭಾರತೀಯ ಜನತಾ ಪಾರ್ಟಿ, ಬಿಎಸ್ ಯಡಿಯೂರಪ್ಪ ಅವರನ್ನು ಕೈಕಾಲು ಹಿಡಿದು ಮಾತನಾಡಿರುವ ಆಡಿಯೋ, ವಿಡಿಯೋಗಳನ್ನು ಬಿಡುಗಡೆ ಮಾಡಬೇಕಾ. ಈ ಹಿಂದೆ ಯಡಿಯೂರಪ್ಪ ಅವರಿಂದ ರಾಜಕೀಯ ಬದುಕು ಎಂದಿದ್ದ ಯತ್ನಾಳ್ ಅವರ ಈಗ ಯಾಕೆ ಹೀಗೇ ಹೇಳುತ್ತಿದ್ದಾರೆ. ಅನಗತ್ಯವಾಗಿ ಈ ವೀರಶೈವ, ಲಿಂಗಾಯತ ಸಮುದಾಯವನ್ನು ಮುಂದಿಟ್ಟು ಮಾತನಾಡುತ್ತಿರುವ ಯತ್ನಾಳ್ ಅವರು ಹೊಸ ಪಕ್ಷ ಕಟ್ಟಲಿ ಎಂದು ಸವಾಲೆಸೆದರು.