Publish Date: Fri, 10 May 2019 (17:23 IST)
Updated Date: Fri, 10 May 2019 (17:25 IST)
ಬರಗಾಲದಿಂದ ತತ್ತರಿಸುತ್ತಿರುವ, ಕುಡಿಯುವ ನೀರಿಗೆ ಹಾಹಾಕಾರ ಪಡುತ್ತಿರುವ ಜನರ ಆರೋಗ್ಯ ವಿಚಾರಿಸುವ ಬದಲು ರಾಜ್ಯದ ಮುಖ್ಯಮಂತ್ರಿ ರೆಸಾರ್ಟ್‍ನಲ್ಲಿ ವಿಶ್ರಾಂತಿ ತಗೆದುಕೊಳ್ಳುತ್ತಿದ್ದಾರೆ. ಅವರ ಮಂತ್ರಿಗಳು ಚುನಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಟೀಕೆ ಮಾಡಿದ್ದಾರೆ.
ಚಿಂಚೋಳಿ ವಿಧಾನಸಭಾ ಕ್ಷೇತ್ರದ ವಿವಿಧ ಹಳ್ಳಿಗಳಲ್ಲಿ ಡಾ. ಅವಿನಾಶ್ ಜಾಧವ್ ಪರ ಪ್ರಚಾರ ನಡೆಸಿದ ಆರ್. ಅಶೋಕ ಮೈತ್ರಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗಿದ್ದು, 22 ಲೋಕಸಭಾ ಸ್ಥಾನಗಳಲ್ಲಿ ಗೆಲವು ಸಾಧಿಸಲಿದ್ದೇವೆ ಎಂದರು.
ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯಿದೆ, ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಎಲ್ಲರೂ ಬ್ಯೂಸಿ ಇದ್ದರು. ಆದರೆ ಈಗ ಅವಕಾಶ ಇದ್ದರೂ ಬರ ನಿರ್ವಹಣೆ ಮಾಡುತ್ತಿಲ್ಲ. ರಾಜ್ಯದ ಎಲ್ಲಾ ಸಚಿವರು ಚಿಂಚೋಳಿಗೆ ಬಂದು ಕುಳಿತಿದ್ದಾರೆ.
ಕಳೆದ 6 ತಿಂಗಳ ಹಿಂದಿನಿಂದ ಬರ ನಿರ್ವಹಣೆಗೆ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಆದರೆ, ಯಾವುದೇ ತಯಾರಿ ನಡೆಸದೆ ಈಗ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರಕಾರದ ಮೇಲೆ ಬೆರಳು ತೋರಿಸುತ್ತಿದ್ದಾರೆ. ಕುಣಿಯಲು ಬಾರದವರು ನೆಲ ಡೊಂಕು ಎನ್ನುವಂತಿದೆ. ನಿಮಗೆ ಕೆಲಸ ಮಾಡಲಾಗದೆ ಕೇಂದ್ರದ ವಿರುದ್ಧ ಬೆರಳು ತೋರಿಸುವಲ್ಲಿ ನಿಸ್ಸೀಮರಾಗಿದ್ದೀರಿ ಎಂದು ದೂರಿದ್ರು.