ಬೆಂಗಳೂರು : ಚಳಿಗಾಲ ಬಂತು ಸ್ವೆಟರ್ಸ್ ಕೊಡಿ ಪ್ಲೀಸ್ ಎಂದು ಅಂಗಲಾಚುತ್ತಿರುವ 25 ಸಾವಿರ ಬಿಬಿಎಂಪಿ ಶಾಲಾ ಮಕ್ಕಳ ಕೂಗು ಪಾಲಿಕೆ ಆಡಳಿತಕ್ಕೆ ಕೇಳಿಸದಿರುವುದು ಮಾತ್ರ ದುರಂತವೇ ಸರಿ.
ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಚಳಿಗಾಲ ಸಮೀಪಿಸುತ್ತಿದೆ. ಹಿಂದೆ ವಿತರಿಸಲಾಗಿದ್ದ ಕಳಪೆ ಗುಣಮಟ್ಟದ ಸ್ವೆಟರ್ಸ್ಗಳು ಹಾಳಾಗಿ ಮೂಲೆ ಸೇರಿವೆ. ಮಕ್ಕಳು ನಡುಗುತ್ತಾ ಶಾಲೆಗೆ ಬರಬೇಕಾಗಿದೆ. ಇಷ್ಟಾದರೂ ಬಿಬಿಎಂಪಿ ಮಾತ್ರ ಶಾಲಾ ಮಕ್ಕಳಿಗೆ ಸ್ವೆಟರ್ಸ್ ವಿತರಣೆಗೆ ಗಮನ ಕೊಡದೆ ಕಾಲಹರಣ ಮಾಡ್ತಿದೆ.
ಅರ್ಧ ವರ್ಷವೇ ಮುಗಿದ್ರೂ ಸಿಗದ ಸ್ವೆಟರ್ಸ್ ಗಳಿಗಾಗಿ 25 ಸಾವಿರ ಮಕ್ಕಳು ಜಾತಕಪಕ್ಷಿಗಳಂತಾಗಿದ್ದಾರೆ. ಶಾಲೆಗಳತ್ತ ಹೋದ್ರೆ ಸಾಕು, ನಮಗೆ ಸ್ವೆಟರ್ಸ್ ಕೊಡಿ ಸರ್, ಪ್ಲೀಸ್..ಪ್ಲೀಸ್.. ಎಂದು ಅಂಗಲಾಚುತ್ತಿದ್ದಾರೆ.