ಬೆಂಗಳೂರು: ರನ್ಯಾ ರಾವ್ ಗೆ ಗೃಹಸಚಿವ ಡಾ ಜಿ ಪರಮೇಶ್ವರ್ 15-20 ಲಕ್ಷ ಮದುವೆಗೆ ಅಂತ ಗಿಫ್ಟ್ ಕೊಟ್ಟಿದ್ದಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ಉಲ್ಲೇಖಿಸಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ನಮ್ಮ ಮದುವೆಗೆ ಬಂದ್ರೂ ಪರಮೇಶ್ವರ್ 20 ಲಕ್ಷ ರೂ. ಗಿಫ್ಟ್ ಕೊಡ್ತಾರಾ ಎಂದು ಕಾಲೆಳೆದಿದ್ದಾರೆ.
ಗೃಹಸಚಿವ ಡಾ ಜಿ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಗೋಲ್ಡ್ ಸ್ಮಗ್ಲಿಂಗ್ ಆರೋಪಿ ನಟಿ ರನ್ಯಾ ರಾವ್ ಖಾತೆಗೆ 40 ಲಕ್ಷ ರೂ. ಸಂದಾಯವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿತ್ತು. ಸತತ 27 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿತ್ತು.
ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಸಿಎಂ ಡಿಕೆ ಶಿವಕುಮಾರ್, ಪರಮೇಶ್ವರ್ ಒಬ್ಬ ಸಜ್ಜನ ರಾಜಕಾರಣಿ. ಎಲ್ಲರೂ ಟ್ರಸ್ಟ್ ಎಂದು ಮಾಡಿಕೊಂಡಿರುತ್ತಾರೆ. ಮದುವೆಗೋ, ಇನ್ಯಾವುದೋ ಕಾರ್ಯಕ್ರಮಕ್ಕೋ ದುಡ್ಡು ಕೊಡ್ತಾರೆ. ಪರಮೇಶ್ವರ್ ಅವರು ರನ್ಯಾ ಮದುವೆಗೆ 15-20 ಲಕ್ಷ ರೂ. ಕೊಟ್ಟಿದ್ದಾರಂತೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಇದು ಬಿಟ್ಟರೆ ಬೇರೇನೂ ಇಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಇದರ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಯಾಗುತ್ತಿದೆ. ಯಾವುದೋ ನಟಿ ಮದುವೆಗೆ ಪರಮೇಶ್ವರ್ ಯಾವುದೇ ಉದ್ದೇಶವಿಲ್ಲದೇ 15-20 ಲಕ್ಷ ನೀಡುತ್ತಾರೆಂದರೆ ಸಾಮಾನ್ಯರ ಮದುವೆಗೂ ಹೀಗೇ ಸಹಾಯ ಮಾಡುತ್ತಾರಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.