ಬೆಂಗಳೂರು: ಗೃಹಸಚಿವ ಡಾ ಜಿ ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯಾದ ಬೆನ್ನಲ್ಲೇ ಇದೀಗ ಸಚಿವರ ದಂಡೇ ಪರಮೇಶ್ವರ್ ಬೆಂಬಲಕ್ಕೆ ನಿಂತಿದೆ.
ಗೃಹಸಚಿವ ಡಾ ಪರಮೇಶ್ವರ್ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಇಡಿ ದಾಳಿಯಾಗಿದೆ. ನಿನ್ನೆಯಿಂದ ಅಧಿಕಾರಿಗಳು ಪರಮೇಶ್ವರ್ ಒಡೆತನದ ಕಾಲೇಜಿನಲ್ಲಿ ಹಣಕಾಸಿನ ಅವ್ಯವಹಾರದ ಕುರಿತು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಿಂದ ಗೋಲ್ಡ್ ಸ್ಮಗ್ಲಿಂಗ್ ಆರೋಪಿ ರನ್ಯಾ ರಾವ್ ಗೆ 40 ಲಕ್ಷ ರೂ. ಸಂದಾಯವಾಗಿದೆ ಎಂಬ ಆರೋಪವಿದೆ. ಈ ಹಿನ್ನಲೆಯಲ್ಲಿ ಗೃಹಸಚಿವರಿಗೆ ಈಗ ಸಂಕಷ್ಟ ಎದುರಾಗಿದೆ. ಆದರೆ ಪರಮೇಶ್ವರ್ ಬೆಂಬಲಕ್ಕೆ ಸಚಿವರು ನಿಂತಿದ್ದಾರೆ.
ಇಂದು ಸಚಿವರಾದ ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ ಪರಮೇಶ್ವರ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಾಮಲಿಂಗಾ ರೆಡ್ಡಿ ಸೇರಿದಂತೆ ಸಚಿವರು ಪರಮೇಶ್ವರ್ ಪರವಾಗಿ ಹೇಳಿಕೆ ನೀಡಿದ್ದಾರೆ. ಇದೆಲ್ಲಾ ದಲಿತ ನಾಯಕ ಎಂಬ ಕಾರಣಕ್ಕೆ ಪರಮೇಶ್ವರ್ ತುಳಿಯುವ ಯತ್ನ ಎಂದಿದ್ದಾರೆ. ಹೀಗಾಗಿ ಇಡಿ ದಾಳಿಯಿಂದ ಕಂಗೆಟ್ಟಿರುವ ಪರಮೇಶ್ವರ್ ಗೆ ಸಚಿವರ ಅಭಯ ಸಮಾಧಾನ ತಂದಿದೆ.