Select Your Language

Notifications

webdunia
webdunia
webdunia
webdunia

ದೇಶದಲ್ಲಿ ನಿರುದ್ಯೋಗ ಪ್ರಮಾಣ ಆತಂಕಕಾರೀ ಮಟ್ಟಕ್ಕೆ ತಲುಪಿದೆ: ರಣದೀಪ್ ಸುರ್ಜೇವಾಲ

Randeep Surjewala

Krishnaveni K

ಬೆಂಗಳೂರು , ಬುಧವಾರ, 9 ಜುಲೈ 2025 (16:48 IST)
Photo Credit: Instagram
ಬೆಂಗಳೂರು: ಬಿಜೆಪಿ ಸರ್ಕಾರ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (ಪಿಎಸ್ ಯು) 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗದೆ ಉಳಿದಿರುವುದು ದೇಶದ ಅತಿದೊಡ್ಡ ದುರಂತ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.

ಮಾಧ್ಯಮಗಳೊಂದಿಗೆ ಇಂದು ಮಾತನಾಡಿದ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಮಾಡಿದ ದ್ರೋಹವು ದೇಶಾದ್ಯಂತ ಕಾರ್ಮಿಕ ದಂಗೆಯನ್ನು ಹುಟ್ಟುಹಾಕಿದೆ; ಕಾರ್ಮಿಕ ಸಂಘಗಳು ಹಲವಾರು ಆರೋಪಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿವೆ.

ಸಶಸ್ತ್ರ ಪಡೆಗಳಲ್ಲಿ ಸುಮಾರು 1.55 ಲಕ್ಷ ಹುದ್ದೆಗಳಿವೆ. ರೈಲ್ವೆ ಇಲಾಖೆಯಲ್ಲಿ 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಸಿಆರ್ಪಿಎಫ್, ಬಿಎಸ್ಎಫ್ ಮತ್ತು ಐಟಿಬಿಪಿ ಸೇರಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 85,000 ಕ್ಕೂ ಹೆಚ್ಚು ಖಾಲಿ ಹುದ್ದೆಗಳಿವೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸಾರ್ವಜನಿಕ ಸೇವಾ ಸಿಬ್ಬಂದಿಯ ತುರ್ತು ಅಗತ್ಯದ ಹೊರತಾಗಿಯೂ, ಭಾರತ ಸರ್ಕಾರ ಈ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲು ಮೀನಮೇಷ ಎಣಿಸುತ್ತಿರುವುದು ಏಕೆ?’ ಎಂದು ಪ್ರಶ್ನಿಸಿದ್ದಾರೆ.

‘ಭಾರತದಲ್ಲಿ ನಿರುದ್ಯೋಗವು ಆತಂಕಕಾರಿ ಮಟ್ಟವನ್ನು ತಲುಪಿದೆ, ದೇಶದಲ್ಲಿ ನಿರುದ್ಯೋಗ ಬೆಳವಣಿಗೆ ದರ 7.5% ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ತಿಳಿಸಿದೆ. ಇದು 45 ವರ್ಷಗಳಲ್ಲಿಯೇ ದಾಖಲಾದ ಅತಿ ಹೆಚ್ಚು ನಿರುದ್ಯೋಗ ದರವಾಗಿದೆ. ಈ ಬಿಕ್ಕಟ್ಟಿನ ಹೊರತಾಗಿಯೂ, ಸರ್ಕಾರವು ಪರಿಣಾಮಕಾರಿ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಸರ್ಕಾರದ ನಿಷ್ಕ್ರಿಯತೆಯ ಬಗ್ಗೆ ಪ್ರಧಾನಿ ಮೋದಿಯವರ ಗಮನ ಸೆಳೆಯಲು ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ.

ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗಿಯೇ ಬೆಳೆಯುತ್ತಿದ್ದಾರೆ. ಭಾರತದಲ್ಲಿ ಸಂಪತ್ತಿನ ಅಸಮಾನತೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ವರದಿಗಳ ಪ್ರಕಾರ, ಭಾರತೀಯರಲ್ಲಿ ಅಗ್ರ 10% ಜನರು ದೇಶದ ಒಟ್ಟು ಸಂಪತ್ತಿನ 77% ಪಾಲನ್ನು ಅನ್ನು ಹೊಂದಿದ್ದಾರೆ; ಆದರೆ ಕೆಳಗಿನ 15% ಜನರು ಕೇವಲ 13% ಅನ್ನು ಹೊಂದಿದ್ದಾರೆ’ ಎಂದು ದೂರಿದ್ದಾರೆ.

‘ದೇಶದ ತಲಾ ಆದಾಯ ಜಿಡಿಪಿ (GDP) ಮಟ್ಟದ ಪ್ರಕಾರ ವಿಶ್ವದ 50 ನೇ ಬಡ ರಾಷ್ಟ್ರವಾಗಿದೆ, ಬಾಂಗ್ಲಾದೇಶ, ಕಾಂಬೋಡಿಯಾ, ಕೀನ್ಯಾ ಮತ್ತು ಹೈಟಿಯಂತಹ ದೇಶಗಳಿಗಿಂತ ಸರಾಸರಿ $2,900 (ಸುಮಾರು ₹2.42 ಲಕ್ಷ) ಕಡಿಮೆಯಾಗಿದೆ. ಜಾಗತಿಕ ಸರಾಸರಿ ತಲಾ ಆದಾಯವು ಸುಮಾರು $13,000 (ಸುಮಾರು ₹10.85 ಲಕ್ಷ), ಈ ಅಂಕಿಅಂಶಗಳನ್ನು ನೋಡಿದರೆ ಪ್ರಸ್ತುತ ಸರ್ಕಾರದ ಆಡಳಿತದಲ್ಲಿ ಭಾರತ ಎಷ್ಟು ಹಿಂದುಳಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಬಿಜೆಪಿಯ MGNREGA ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಸುಮಾರು 7 ಕೋಟಿ ಜನರು ಕೆಲಸವನ್ನೇ ಕಳೆದುಕೊಂಡಿದ್ದಾರೆ. ಈ ಯೋಜನೆಯು ಬಡವರಿಗೆ ಸಹಾಯ ಮಾಡುವ ಬದಲು ಅವರನ್ನು ಕೆಲಸದಿಂದ ಹೊರಗಿಡುವ ಸಾಧನವಾಗಿ ಬಳಸಲಾಗುತ್ತಿದೆ. ಆಧಾರ್-MGNREGA ಕಾರ್ಡ್ ಲಿಂಕ್ ಮಾಡುವುದರಿಂದ 7 ಕೋಟಿ ನೋಂದಾಯಿತ ಕಾರ್ಮಿಕರಿಗೆ ಅವರ ಸರಿಯಾದ ವೇತನ ಮತ್ತು ಉದ್ಯೋಗವೇ ಮಂಗಮಾಯವಾಗಿದೆ’ ಎಂದು ಟೀಕಿಸಿದ್ದಾರೆ.

 ‘MGNREGA ಅಡಿಯಲ್ಲಿ ಒಟ್ಟು ವ್ಯಕ್ತಿ-ದಿನಗಳ ಕೆಲಸದ ಅವಧಿ 2023–24ರಲ್ಲಿ 312.37 ಕೋಟಿಯಿಂದ ಫೆಬ್ರವರಿ 2025 ರ ವೇಳೆಗೆ ಕೇವಲ 239.67 ಕೋಟಿಗೆ ಇಳಿದಿದೆ ಮತ್ತು ಪ್ರತಿ ಮನೆಯ ಸರಾಸರಿ ಕೆಲಸದ ದಿನಗಳು 52.08 ರಿಂದ ಕೇವಲ 44.62 ಕ್ಕೆ ಇಳಿದಿವೆ. ಈ ವರ್ಷದ MGNREGA ಬಜೆಟ್ ₹86,000 ಯಿಂದ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ರೂ. 9,754 ಕೋಟಿ ಕಡಿಮೆಯಾಗಿದೆ.

ಕಾಂಗ್ರೆಸ್ 100 ದಿನಗಳ ಕೆಲಸವನ್ನು ಖಾತರಿಪಡಿಸಿ ಕ್ರಾಂತಿಕಾರಿ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈ ಭ್ರಷ್ಟ ಬಿಜೆಪಿ ಅದನ್ನು ಕೇವಲ 45 ಕ್ಕೆ ಇಳಿಸಿದೆ, ಈ ಕ್ರಮವನ್ನು ಕಾರ್ಮಿಕ ಸಂಘಗಳು ತೀವ್ರವಾಗಿ ವಿರೋಧಿಸುತ್ತಿವೆ.

ಬಿಜೆಪಿ ಆಡಳಿತದಲ್ಲಿ, ಭಾರತವು 2023 ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 125 ದೇಶಗಳಲ್ಲಿ 111 ನೇ ಸ್ಥಾನಕ್ಕೆ ಕುಸಿದಿದೆ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಕ್ಕಿಂತ ಕೆಳಗಿದೆ. ಈ ಆತಂಕಕಾರಿ ಕುಸಿತವು ಮಕ್ಕಳ ಅಪೌಷ್ಟಿಕತೆ, ಹಸಿವು ಮತ್ತು ವ್ಯಾಪಕ ಆಹಾರ ಅಭದ್ರತೆಯನ್ನು ಪರಿಹರಿಸುವಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ’ ಎಂದು ಅಂಕಿ ಅಂಶ ಸಹಿತ ವಿವರಿಸಿದರು.

‘ಜೀವಿತಾವಧಿ, ಶಿಕ್ಷಣ ಮತ್ತು ಆದಾಯವನ್ನು ಅಳೆಯುವ UNDP ಯ ಮಾನವ ಅಭಿವೃದ್ಧಿ ಸೂಚ್ಯಂಕ (2022)ದಲ್ಲಿ ಭಾರತವು 193 ರಲ್ಲಿ 134 ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತದಲ್ಲಿ ನಮಗೆ ಶ್ರೇಯಾಂಕವೇ ಸಿಗದಾಗಿದೆ. ಅಸಮಾನತೆ, ಕಳಪೆ ಆರೋಗ್ಯ ವ್ಯವಸ್ಥೆಗಳು ಮತ್ತು ದುರ್ಬಲ ಸಾರ್ವಜನಿಕ ಶಿಕ್ಷಣದಿಂದ ಜನರು ಬಳಲುವಂತಾಗಿದೆ.

ವಿಶ್ವ ಆರ್ಥಿಕ ವೇದಿಕೆಯ 2023 ರ ಸಮೀಕ್ಷೆಯಂತೆ ಜಾಗತಿಕ ಲಿಂಗ ಅಸಮಾನತೆ ಸೂಚ್ಯಂಕದಲ್ಲಿ ಭಾರತವು 146 ರಲ್ಲಿ 127 ನೇ ಸ್ಥಾನದಲ್ಲಿದೆ. ಕಡಿಮೆ ಆದಾಯದ ಮಟ್ಟಗಳು, ಕಳಪೆ ಆರೋಗ್ಯ ರಕ್ಷಣೆ, ದುರ್ಬಲ ಮೂಲಸೌಕರ್ಯ ಮತ್ತು ಹೆಚ್ಚಿನ ಮಾಲಿನ್ಯದಿಂದಾಗಿ ಜಾಗತಿಕ ಜೀವನ ಗುಣಮಟ್ಟ ಸೂಚ್ಯಂಕದಲ್ಲಿ ಭಾರತವು 173 ರಲ್ಲಿ 121 ನೇ ಸ್ಥಾನದಲ್ಲಿದೆ. ಬಿಜೆಪಿಯ ಅಡಿಯಲ್ಲಿ, ನಾಗರಿಕರ ದೈನಂದಿನ ಜೀವನವನ್ನು ಸುಧಾರಿಸುವ ಬದಲು ಕೇವಲ ಸುದ್ದಿ ಸ್ನೇಹಿ ಯೋಜನೆಗಳ ಮೇಲೆ ಗಮನ ಹರಿಸುತ್ತಿದೆ.

ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದ 2024 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 180 ರಲ್ಲಿ 159 ನೇ ಸ್ಥಾನದಲ್ಲಿದೆ. ಬಿಜೆಪಿ ಆಡಳಿತವು ಅಭಿಪ್ರಾಯ ಸ್ವತಂತ್ರ್ಯವನ್ನೇ ಹತ್ತಿಕ್ಕಿದೆ, ಪತ್ರಕರ್ತರನ್ನು ಜೈಲಿಗೆ ಹಾಕಿದೆ ಮತ್ತು ಸ್ವತಂತ್ರ ಮಾಧ್ಯಮಕ್ಕೆ ಬೆದರಿಕೆ ಹಾಕಲು ರಾಜ್ಯ ಅಧಿಕಾರವನ್ನು ಬಳಸಿದೆ; ಇದು ದಶಕಗಳಲ್ಲಿಯೇ ಭಾರತದ ಅತ್ಯಂತ ಕೆಟ್ಟ ಪತ್ರಿಕಾ ಸ್ವಾತಂತ್ರ್ಯ ಶ್ರೇಯಾಂಕಕ್ಕೆ ಕಾರಣವಾಗಿದೆ’ ಎಂದರು.

‘ಬಿಜೆಪಿ ಆಳ್ವಿಕೆಯಲ್ಲಿ, 2019 ರಿಂದ ಭಾರತವು ಮೋಟಾರ್ ಸೈಕಲ್ಗಳು ಮತ್ತು ಸ್ಕೂಟರ್ಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಗ್ರಾಮೀಣ ಜನರ ಆದಾಯ ಕುಸಿದಿರುವುದು, ಅನಿಶ್ಚಿತ ವೇತನ, ಇಂಧನ ಬೆಲೆ ಏರಿಕೆ ಮತ್ತು ವಾಹನಗಳ ಮೇಲಿನ ಜಿಎಸ್ಟಿ ಮುಂತಾದ ಕಾರಣಗಳಿಂದಾಗಿ ಈ ಸಮಸ್ಯೆ ಎದುರಾಗಿದೆ.

ಮೋದಿ ಸರ್ಕಾರದ ಅಡಿಯಲ್ಲಿ ಎಫ್ಎಂಸಿಜಿ ವಲಯವು ತನ್ನ ಕೆಟ್ಟ ದಿನಗಳನ್ನು ಕಂಡಿದೆ. ಹಿಂದೂಸ್ತಾನ್ ಯೂನಿಲಿವರ್, ಡಾಬರ್, ಮಾರಿಕೊ ಕಂಪೆನಿಗಳು ಗ್ರಾಮೀಣ ಬೇಡಿಕೆ ಕುಸಿದಿರುವ ಕಾರಣಕ್ಕೆ ಆದಾಯ ಕಡಿಮೆಯಾಗುವುದು ಮತ್ತು ಉದ್ಯೋಗ ನಷ್ಟಗಳ ಹೆಚ್ಚಳ ಮುಂತಾದ ಕಾರಣಗಳಿಂದಾಗಿ ಬೇಡಿಕೆಯೂ ಕಡಿಮೆಯಾಗಿದೆ ಎಂದಿವೆ.

ಜವಳಿ ವಲಯವು ಸಹ ತಾನು ಹಿಂದೆಂದೂ ಕಂಡಿರದ ಬಿಕ್ಕಟ್ಟನ್ನು ಕಂಡಿದೆ. ಸಾವಿರಾರು ಜವಳಿ ಘಟಕಗಳು ಮುಚ್ಚಿಹೋಗಿವೆ ಮತ್ತು ಕಾರ್ಮಿಕರನ್ನು ಕೆಲಸದಿಂದ ತೆಗೆದುಹಾಕಿವೆ. ಉದಾಹರಣೆಗೆ, ಸೂರತ್ನಲ್ಲಿ, ಜವಳಿ ಉದ್ಯಮವು 2023 ರಲ್ಲಿ 30% ಕ್ಕಿಂತ ಹೆಚ್ಚು ಉತ್ಪಾದನೆ ಕುಸಿತವನ್ನು ವರದಿ ಮಾಡಿದೆ’ ಎಂದು ದೂರಿದ್ದಾರೆ.

‘ಭಾರತದ ಅತಿದೊಡ್ಡ ಉದ್ಯೋಗ ಸೃಷ್ಟಿಯಾಗುವುದು ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳಿಂದ. ಬಿಜೆಪಿಯ ದುರಾಡಳಿತದಿಂದ ಇವು ಸಹ ಪರಬಾರದ ಕಷ್ಟ-ನಷ್ಟ ಅನುಭವಿಸುತ್ತಿವೆ. ಈ ವಲಯವು ದೀರ್ಘಕಾಲದ ಮಂದಗತಿಯನ್ನು ಎದುರಿಸುತ್ತಿದೆ, 2022 ರ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ ಮಾರಾಟವಾಗದ ಮನೆಗಳ ಸಂಖ್ಯೆ 10 ಲಕ್ಷ ಯೂನಿಟ್ಗಳನ್ನು ದಾಟಿದೆ. ಶ್ರೀಮಂತರು ರಿಯಲ್ ಎಸ್ಟೇಟ್ ಅನ್ನು ಸಂಪತ್ತು-ನಿರ್ಮಾಣ ಆಸ್ತಿಯಾಗಿ ಪರಿಗಣಿಸುತ್ತಾ ಬಹು ಆಸ್ತಿಗಳಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಿದರೆ, ಮಧ್ಯಮ ವರ್ಗ ಮತ್ತು ಬಡವರು ತಮ್ಮ ಜೀವನ ನಿರ್ವಹಣೆಗೆ ಮಾತ್ರ ಹೆಣಗಾಡುತ್ತಿದ್ದಾರೆ.

FICCI ಮತ್ತು Quess Corp ವೇತನ ಸಮೀಕ್ಷೆಯು ತೀವ್ರ ವೇತನ ಕಡಿತವನ್ನು ಜಗಜ್ಜಾಹೀರು ಮಾಡಿವೆ. ನಾಮಮಾತ್ರ ವೇತನ ಹೆಚ್ಚಳವು ಕೇವಲ 0.8% ರಿಂದ 5% ವರೆಗೆ ಇರುತ್ತದೆ, ಆದರೆ ಹಣದುಬ್ಬರ ದರವು 5.7% ಆಗಿದೆ. ಅಂತಹ ಸನ್ನಿವೇಶದಲ್ಲಿ, ಮಧ್ಯಮ ಮತ್ತು ಬಡ ವರ್ಗಗಳು ಎಲ್ಲಿಗೆ ಹೋಗಬೇಕು, ಬರುತ್ತಿರುವ ಸಂಬಳ, ಆದಾಯ ನೋಡಿದರೆ ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸಹ ಪೂರೈಸಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಭಾರತದ ಕಾರ್ಮಿಕ ವರ್ಗವು ಅನಿಶ್ಚಿತ ಸ್ಥಿತಿಯಲ್ಲಿದೆ, 80% ಜನರು ಅಸಂಘಟಿತ ವಲಯದಲ್ಲಿ ಉದ್ಯೋಗದಲ್ಲಿದ್ದಾರೆ, 60% ಜನರು ಯಾವುದೇ ಒಪ್ಪಂದವಿಲ್ಲದೆ ಕೆಲಸ ಮಾಡುತ್ತಿದ್ದಾರೆ ಮತ್ತು 53% ಜನರು ಯಾವುದೇ ರೀತಿಯ ಸಾಮಾಜಿಕ ಭದ್ರತೆಯನ್ನು ಹೊಂದಿಲ್ಲ. ಈ ವಿಚಾರಗಳೇ ದೇಶದಲ್ಲಿ ಅನಿಶ್ಚಿತತೆಯನ್ನು ಉಂಟು ಮಾಡಿರುವುದು. ಇದು ದೇಶಾದ್ಯಂತ ಲಕ್ಷಾಂತರ ಜನರ ಜೀವನೋಪಾಯ ಮತ್ತು ಘನತೆಗೆ ಬೆದರಿಕೆ ಹಾಕುವ ಒಂದು ಟೈಮ್ ಬಾಂಬ್ ಆಗಿದೆ. ಬಿಜೆಪಿ ಮತ್ತು ಮೋದಿ ಸರ್ಕಾರವು ಇಂದು ಜನರು ಎದುರಿಸುತ್ತಿರುವ ನಿಜವಾದ ಹೋರಾಟಗಳನ್ನು ತಮ್ಮ ಕಣ್ಣುಗಳನ್ನು ತೆರೆದು ನೋಡಬೇಕು ಜೊತೆಗೆ ಒಪ್ಪಿಕೊಳ್ಳಬೇಕು ಎಂದು ಈ ಮೂಲಕ ಕಾಂಗ್ರೆಸ್ ಒತ್ತಾಯಿಸುತ್ತದೆ’ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಸೇತುವೆ ಕುಸಿತ, ನದಿಗೆ ಬಿದ್ದ ವಾಹನಗಳೆಷ್ಟು, ಬದುಕ್ಕಿದ್ದವರೆಷ್ಟು