ಬೆಂಗಳೂರು: ಚನ್ನಪಟ್ಟಣ ಕಾಂಗ್ರೆಸ್ ಶಾಸಕ ಸಿಪಿ ಯೋಗೇಶ್ವರ್ ವಿರುದ್ಧ ಅವರ ಮಾಜಿ ಪತ್ನಿ ಮಾಳವಿಕಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಗೆ ದೂರು ಕೊಟ್ಟಿದ್ದಾರೆ. ಇದರೊಂದಿಗೆ ಸಿಪಿ ಯೋಗೇಶ್ವರ್ ಫ್ಯಾಮಿಲಿ ವಿಚಾರ ಹೈಕಮಾಂಡ್ ಅಂಗಳಕ್ಕೆ ಬಂದು ನಿಂತಿದೆ.
ಮಾಳವಿಕಾ-ಯೋಗೇಶ್ವರ್ ಪುತ್ರಿ ನಿಶಾ ಕೂಡಾ ಕೆಲವು ಸಮಯದ ಹಿಂದೆ ಕಾಂಗ್ರೆಸ್ ಗೆ ಸೇರ್ಪಡೆಯಾದವರು. ಆಗಲೇ ಅವರು ತಂದೆ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ನಮಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೀಗ ನಿಶಾ ತಮ್ಮ ತಾಯಿ ಮಾಳವಿಕಾ ಜೊತೆಗೂಡಿ ರಣದೀಪ್ ಸುರ್ಜೇವಾಲ ಭೇಟಿ ಮಾಡಿದ್ದು ಯೋಗೇಶ್ವರ್ ವಿರುದ್ಧ ದೂರು ನೀಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಳವಿಕಾ ನನಗೆ ಫ್ಯಾಮಿಲಿ ವಿಚಾರವನ್ನು ಬೀದಿಗೆ ತರಲು ಇಷ್ಟವಿರಲಿಲ್ಲ. ಆದರೆ ಈಗ ನನ್ನ ಮಕ್ಕಳಿಗೆ ಉಸಿರಾಡಲು ಕಷ್ಟವಾಗುವ ಪರಿಸ್ಥಿತಿಯಾಗಿದೆ. ಹೀಗಾಗಿ ಅನಿವಾರ್ಯವಾಗಿ ದೂರು ಕೊಡಬೇಕಾಯಿತು. ನನಗೆ ಹೈಕಮಾಂಡ್ ನಾಯಕರ ಮೇಲೆ, ಪಕ್ಷದ ಮೇಲೆ ಅಪಾರ ಗೌರವ ಮತ್ತು ನಂಬಿಕೆಯಿದೆ. ಅವರು ನಮಗೆ ಸಮಯ ಕೊಟ್ಟು ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ಎಂದಿದ್ದಾರೆ.
ಸಿಪಿ ಯೋಗೇಶ್ವರ್ ಅವರ ಮೊದಲ ಪತ್ನಿ ಮಾಳವಿಕಾ. ಈಗ ಯೋಗೇಶ್ವರ್ ಶೀಲಾ ಎಂಬವನ್ನು ಎರಡನೇ ಮದುವೆಯಾಗಿದ್ದಾರೆ. ಮೊದಲ ಪತ್ನಿ, ಮಕ್ಕಳೊಂದಿಗೆ ಕೌಟುಂಬಿಕ ಜಗಳ ಗುಟ್ಟಾಗೇನೂ ಉಳಿದಿಲ್ಲ. ಈಗ ಹೈಕಮಾಂಡ್ ಗೆ ದೂರು ಹೋಗಿದೆ.