Select Your Language

Notifications

webdunia
webdunia
webdunia
webdunia

ಬಹುನಿರೀಕ್ಷಿತ ಬೆಂಗಳೂರು- ಬೆಳಗಾವಿ ವಂದೇ ಭಾರತ್ ರೈಲು ಸಂಚಾರಕ್ಕೆ ರೈಲ್ವೆ ಸಚಿವ ಗ್ರೀನ್‌ಸಿಗ್ನಲ್‌

Bangalore – Belgaum Vande Bharat Train

Sampriya

ಬೆಂಗಳೂರು , ಮಂಗಳವಾರ, 11 ಫೆಬ್ರವರಿ 2025 (14:12 IST)
Photo Courtesy X
ಬೆಂಗಳೂರು:  ಬೆಳಗಾವಿ- ಬೆಂಗಳೂರು ಮಧ್ಯೆ ಸಂಚರಿಸುವವರಿಗೆ ಶುಭಸುದ್ದಿ. ಈ ನಗರಗಳ ಮಧ್ಯೆ ಬಹುನಿರೀಕ್ಷಿತ ವಂದೇ ಭಾರತ್ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗ್ರೀನ್‌ಸಿಗ್ನಲ್‌ ನೀಡಿದ್ದಾರೆ.

ಕೇಂದ್ರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ, ಧಾರವಾಡ ಸಂಸದ ಪ್ರಹ್ಲಾದ್‌ ಜೋಶಿ ಈ ಕುರಿತು ಮಾಹಿತಿ ನೀಡಿದ್ದು, ಶೀಘ್ರದಲ್ಲಿಯೇ ಬೆಳಗಾವಿ ಮತ್ತು ಬೆಂಗಳೂರಿನ ಮಧ್ಯೆ ವಂದೇ ಭಾರತ್ ರೈಲಿನ ಆರಂಭದ ವೇಳಾಪಟ್ಟಿ ಬಿಡುಗಡೆಯಾಗಲಿದೆ ಎಂದು  ತಿಳಿಸಿದ್ದಾರೆ.

ಈ ರೈಲು ಸಂಚಾರದಿಂದ ಹುಬ್ಬಳ್ಳಿ-ಧಾರವಾಡ ಹಾಗೂ ಬೆಳಗಾವಿ ಭಾಗದ ಜನತೆಗೆ ಬೆಂಗಳೂರು ಪ್ರಯಾಣಕ್ಕೆ ಅನುಕೂಲವಾಗಲಿದೆ. ನಮ್ಮ ಮನವಿಗೆ ಸ್ಪಂದಿಸಿ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಲು ಸಮ್ಮತಿ ಸೂಚಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಧನ್ಯವಾದ ಅರ್ಪಿಸುವೆ ಎಂದಿದ್ದಾರೆ.

ಬೆಂಗಳೂರಿನಿಂದ ಬೆಳಗಾವಿವರೆಗೆ ವಂದೇ ಭಾರತ್ ರೈಲು ಸಂಚಾರ ಕುರಿತ ಸಾಧಕ-ಬಾಧಕ ಬಗ್ಗೆ ಸಚಿವ ಪ್ರಹ್ಲಾದ್‌ ಜೋಶಿ  ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿ ವಿಸ್ತೃತ ಚರ್ಚೆ ನಡೆಸಿದ್ದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹಾಗೂ ಬೆಳಗಾವಿ ಶಾಸಕ ಅಭಯ ಪಾಟೀಲ್ ಅವರೂ ವಂದೇ ಭಾರತ್ ರೈಲನ್ನು ಬೆಳಗಾವಿವರೆಗೆ ವಿಸ್ತರಿಸುವ ಕುರಿತು ಈ ಹಿಂದೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು. ಜೋಶಿ ಅವರು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಸಂಸದರ ಕಾರ್ಯಾಲಯದಲ್ಲಿ ನೈರುತ್ಯ ವಲಯದ ರೈಲ್ವೆ ಜನರಲ್ ಮ್ಯಾನೇಜರ್, ಡಿಆರ್‌ಎಂ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ರೈಲು ಸಂಚಾರ ವಿಸ್ತರಣೆ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಬೆಳಗ್ಗೆ ಬೆಳಗಾವಿಯಿಂದ ವಂದೇ ಭಾರತ್‌ ರೈಲು ಹೊರಟು ಬೆಂಗಳೂರು ತಲುಪಿ ಮತ್ತೆ ಬೆಂಗಳೂರಿಂದ ಬೆಳಗಾವಿಗೆ ರಾತ್ರಿ ತಲುಪುವ ಹಾಗೆ ವೇಳೆ ನಿಗದಿಗೊಳಿಸಿ ಎಂದು ಅವರು ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ರೈಲ್ವೆ ಅಧಿಕಾರಿಗಳು ತಾಂತ್ರಿಕ ಅಂಶಗಳನ್ನು ವಿಶ್ಲೇಷಿಸಿ, ಸಾಧಕ-ಬಾಧಕಗಳನ್ನು ಅವಲೋಕಿಸಿ ವರದಿ ಸಲ್ಲಿಸಿದ್ದರು. ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವರದಿ ಪರಿಗಣಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಾಕುಂಭಮೇಳದಿಂದ ಬರುವಾಗ ಭೀಕರ ಅಪಘಾತ, 7 ಸಾವು ಭೀಕರ ವಿಡಿಯೋ ಇಲ್ಲಿದೆ