Publish Date: Fri, 17 Mar 2023 (18:57 IST)
Updated Date: Fri, 17 Mar 2023 (19:05 IST)
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಭಾರತದ ವಿರುದ್ಧ ಕೆಲಸ ಮಾಡುತ್ತಿರುವ ಟೂಲ್‌ಕಿಟ್‌ನ ಶಾಶ್ವತ ಭಾಗವಾಗಿದ್ದಾರೆ ಎಂದು BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ ಟೀಕಿಸಿದ್ದಾರೆ. ನಮ್ಮ ದೇಶದ ವ್ಯವಹಾರದಲ್ಲಿ ಅನ್ಯ ದೇಶಗಳು ಮಧ್ಯ ಪ್ರವೇಶಿಸಬೇಕೆಂದು ರಾಹುಲ್ ನೀಡಿದ ಹೇಳಿಕೆ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ.. ದೇಶವು ಪದೇಪದೆ ತಿರಸ್ಕರಿಸಿದ ಬಳಿಕ ರಾಹುಲ್ ಗಾಂಧಿ, ದೇಶ ವಿರೋಧಿ ಟೂಲ್‌ಕಿಟ್‌ನ ಶಾಶ್ವತ ಭಾಗವಾಗಿದ್ದಾರೆ ಎಂದು ಅವರು ಕುಟುಕಿದ್ದಾರೆ. ಭಾರತವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಜಿ–20 ಸಭೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ರಾಹುಲ್ ಗಾಂಧಿ, ವಿದೇಶಿ ನೆಲದಿಂದ ಭಾರತ, ಸಂಸತ್ ಮತ್ತು ದೇಶದ ಜನರನ್ನು ಅವಮಾನಿಸುವ ಮೂಲಕ ದೇಶ ವಿರೋಧಿಗಳಿಗೆ ಬಲ ನೀಡಿದ್ದಾರೆ ಎಂದು ನಡ್ಡಾ ಟೀಕಿಸಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವದ ಅಂತ್ಯವಾಗಿದೆ. ಯೂರೋಪ್ ಮತ್ತು ಅಮೆರಿಕ ದೇಶಗಳು ಮಧ್ಯಪ್ರವೇಶಿಸಬೇಕೆಂದು ವಿದೇಶಿ ನೆಲದಲ್ಲಿ ನಿಂತು ಹೇಳಿಕೆ ನೀಡಿದ್ದಾರೆ. ಇದಕ್ಕಿಂತ ನಾಚಿಕೆಗೇಡು ಇನ್ನೇನಿದೆ? ಎಂದು ನಡ್ಡಾ ಪ್ರಶ್ನಿಸಿದ್ದಾರೆ.