ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಪ್ರತಿನಿಧಿಸುವ ಕೇರಳದ ವಯನಾಡು ಕ್ಷೇತ್ರದಿಂದ ರಾಜ್ಯ ಸರ್ಕಾರ 10 ಕೋಟಿ ರೂ ಅನುದಾನ ಘೋಷಿಸಿದೆ. ಇದರ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ ಕಾರಿದ್ದು ನೀವು ಕೇರಳ ಸಿಎಮ್ಮಾ ಎಂದು ವ್ಯಂಗ್ಯ ಮಾಡಿದ್ದಾರೆ.
ವಯನಾಡಿನಲ್ಲಿ ಕಳೆದ ವರ್ಷ ಭೂಕುಸಿತವಾಗಿ ಸಾಕಷ್ಟು ಸಾವು-ನೋವು ಸಂಭವಿಸಿತ್ತು. ಆಗ ರಾಹುಲ್ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಆಗಲೇ ರಾಜ್ಯ ಸರ್ಕಾರ 100 ಮನೆಗಳನ್ನು ಕಟ್ಟಿಕೊಡುವುದಾಗಿ ಘೋಷಿಸಿತ್ತು. ಇದೀಗ ಉಪಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಆ ಕ್ಷೇತ್ರದಲ್ಲಿ ಗೆದ್ದು ಸಂಸದೆಯಾಗಿದ್ದಾರೆ.
ಈಗ ಅದೇ ಕ್ಷೇತ್ರಕ್ಕೆ ಪರಿಹಾರ ಕಾರ್ಯಕ್ಕಾಗಿ ಕರ್ನಾಟಕ ಸರ್ಕಾರ 10 ಕೋಟಿ ರೂ. ಅನುದಾನ ಘೋಷಿಸಿದೆ. ಇದರ ವಿರುದ್ಧ ವಿಪಕ್ಷ ನಾಯಕ ಆರ್ ಅಶೋಕ್ ಕೆಂಡ ಕಾರಿದ್ದಾರೆ.
ಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕೇರಳದ ವಯನಾಡು ಲೋಕಸಭಾ ಕ್ಷೇತ್ರಕ್ಕೆ 10 ಕೋಟಿ ರೂಪಾಯಿ ವಿಶೇಷ ಅನುದಾನ ನೀಡಿರುವ ಕೇರಳ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.
ಕೇರಳದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರಂತಹ ಹೃದಯ ವೈಶಾಲ್ಯ ಇರುವ, ಸಂವೇದನಾಶೀಲ ಮುಖ್ಯಮಂತ್ರಿ ಕರ್ನಾಟಕದಲ್ಲೂ ಇದ್ದಿದ್ದರೆ, ಎಲ್ಲ ಕ್ಷೇತ್ರಗಳಿಗೂ ಭರಪೂರ ಅನುದಾನ ಸಿಕ್ಕುತ್ತಿತ್ತು. ನತದೃಷ್ಟ ಕನ್ನಡಿಗರು ಮಲಯಾಳಿಗಷ್ಟು ಅದೃಷ್ಟವಂತರಲ್ಲ ಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ.