ಬೆಂಗಳೂರು: ಮುಷ್ಕರ ಮಾಡಿದ ಸಾರಿಗೆ ನೌಕರರಿಗೆ ಸಂಬಳ ಕಟ್ಟು; ರಸಗೊಬ್ಬರ ಕೇಳಿದ ರೈತರಿಗೆ ಲಾಟಿ ಏಟು, ಇದು ಯಾವ ನ್ಯಾಯ? ಎಂದು ವಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೊನ್ನೆ ಕೆಎಸ್ ಆರ್ ಟಿಸಿ ಮುಷ್ಕರದಲ್ಲಿ ಪಾಲ್ಗೊಂಡ ನೌಕರರಿಗೆ ಸರ್ಕಾರ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಲ್ಲದೆ 1 ದಿನದ ವೇತನ ಕಡಿತ ಮಾಡಿರುವ ಬಗ್ಗೆ ಆರ್ ಅಶೋಕ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಲಾಟರಿ ಸಿಎಂ ಸಿದ್ದರಾಮಯ್ಯನವರೇ, ನಮ್ಮದು ಕಾರ್ಮಿಕರ ಪರವಾದ ಸರ್ಕಾರ, ರೈತರ ಪರವಾದ ಸರ್ಕಾರ ಎಂದು ಬೊಗಳೆ ಬಿಡುತ್ತಿರಲ್ಲ, ಇದೇನಾ ಕಾರ್ಮಿಕರನ್ನು, ರೈತರನ್ನು ನಿಮ್ಮ ಕಾಂಗ್ರೆಸ್ ನಡೆಸಿಕೊಳ್ಳುವ ಪರಿ?
ನಿಮ್ಮ 'ನ್ಯಾಯ ಯೋಧ' ರಾಹುಲ್ ಗಾಂಧಿಯವರು ಕಂಡುಕಂಡಲ್ಲೆಲ್ಲ ಪ್ರದರ್ಶನ ಮಾಡುವ ಸಂವಿಧಾನದಲ್ಲಿ ಸಾರಿಗೆ ನೌಕರರಿಗೆ ಮುಷ್ಕರ ಮಾಡುವ ಹಕ್ಕಿಲ್ಲವಾ? ನಿಮ್ಮ ರಾಹುಲ್ ಗಾಂಧಿ ಅವರು ಪ್ರದರ್ಶನ ಮಾಡುವ ಸಂವಿಧಾನದಲ್ಲಿ ರೈತರಿಗೆ ರಸಗೊಬ್ಬರ ಕೇಳುವ ಹಕ್ಕು ಇಲ್ಲವಾ?
ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಸಿದ್ದರಾಮಯ್ಯನವರೇ. ಈ ಹಿಟ್ಲರ್ ಧೋರಣೆ ಬಿಡಿ. ನಿಮ್ಮ ಕೈಲಾದರೆ ಕಾರ್ಮಿಕರು, ರೈತರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡಿ. ನಿಮ್ಮ ಕೈಯಲ್ಲಿ ಆಗುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.