ಬೆಂಗಳೂರು: ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕೂ ನಿಗಮಗಳ ಬಸ್ ಮುಷ್ಕರದಿಂದಾಗಿ ಸಂಕಷ್ಟ ಅನುಭವಿಸುತ್ತಿರುವವರು ಮಾತ್ರ ಸಾರ್ವಜನಿಕರು. ಇಂದಿನಿಂದ ಕರ್ನಾಟಕದಲ್ಲಿ ನಾಲ್ಕೂ ನಿಗಮಗಳ ಬಸ್ ಮುಷ್ಕರ ಆರಂಭವಾಗಿದೆ. ಇದರಿಂದ ಬೆಳಿಗ್ಗೆಯೇ ಸಾರ್ವಜನಿಕರು ಪರದಾಡುತ್ತಿದ್ದಾರೆ.
ನಿನ್ನೆ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ನಡೆದ ಸಂಧಾನ ಸಭೆ ವಿಫಲವಾದ ಬೆನ್ನಲ್ಲೇ ಸಾರಿಗೆ ನೌಕರರು ಇಂದಿನಿಂದ ಮುಷ್ಕರ ಆರಂಭಿಸಿದ್ದಾರೆ. ನೌಕರರ ರಜೆ ರದ್ದುಗೊಳಿಸಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ತಾಕೀತು ಮಾಡಿದರೂ ಕ್ಯಾರೇ ಎಂದಿಲ್ಲ.
ಇಂದು ಬೆಳಿಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಬಸ್ ಗಳ ಓಡಾಟವಿಲ್ಲದೇ ಜನ ನಿಗದಿತ ಸ್ಥಳಕ್ಕೆ ತೆರಳಲು ಪರದಾಡುತ್ತಿದ್ದರು. ಬೆಳಿಗ್ಗೆ ಕೆಲಸಕ್ಕೆ ಹೋಗಲು ಬಸ್ ಗಳಿಲ್ಲದೇ ಜನ ಖಾಸಗಿ ವಾಹನಗಳನ್ನು ಆಶ್ರಯಿಸುವಂತಾಗಿದೆ.
ಕೆಲವರಿಗೆ ಬಸ್ ಮುಷ್ಕರವಿದೆ ಎಂಬ ಅರಿವೇ ಇಲ್ಲದೇ ದೂರದ ಊರುಗಳಿಂದ ಬಂದಿದ್ದಾರೆ. ಇದೀಗ ಹೋಗಬೇಕಾದ ಸ್ಥಳಕ್ಕೆ ಹೋಗಲು ಸಾಧ್ಯವಾಗದೇ ಬಸ್ ನಿಲ್ದಾಣದಲ್ಲೇ ದಿಕ್ಕು ಕಾಣದೇ ನಿಂತಿದ್ದಾರೆ. ಕೆಲವರಿಗೆ ತುರ್ತಾಗಿ ಹುಷಾರಿಲ್ಲದ ತಮ್ಮವರನ್ನು ನೋಡಲು ತೆರಳಬೇಕು. ಆದರೆ ಬಸ್ಸಿಲ್ಲದೇ ಸಂಕಷ್ಟ ಅನುಭವಿಸುತ್ತಿದ್ದಾರೆ.
ಸರ್ಕಾರಿ ಬಸ್ ಗಳ ಬದಲಾಗಿ ಇಂದು ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸೇವೆಯನ್ನು ಪ್ರತೀ 6 ನಿಮಿಷಗಳಿಗೊಮ್ಮೆ ಸಂಚರಿಸುವಂತೆ ಹೆಚ್ಚುವರಿ ಸೇವೆ ನೀಡಲಾಗಿದೆ. ರಾಜ್ಯದ ಇತರೆ ಭಾಗಗಳಲ್ಲಿ ಖಾಸಗಿ ಬಸ್ ಗಳು ರೋಡ್ ಗಿಳಿದಿವೆ.