ಚಿತ್ರದುರ್ಗ: ತಾಲ್ಲೂಕಿನ ತಮಟಗಲ್ಲು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂತಿದ್ದ ಲಾರಿಗೆ ಇನ್ನೊವಾ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ನಡೆದಿದೆ. ಇನ್ನೂ ಭೀಕರ ರಸ್ತೆ ಅಪಘಾತದಲ್ಲಿ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ಬೆಂಗಳೂರು ಮೂಲದ ಬಿಎಂಟಿಸಿ ನಿವೃತ್ತ ನೌಕರ ಶಾಂತಮೂರ್ತಿ (60), ರುದ್ರಸ್ವಾಮಿ (52), ಮಲ್ಲಿಕಾರ್ಜುನ (50), ಚಿದಂಬರಾಚಾರ್ (50) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇನ್ನೊಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಲ್ಲರೂ ಸವದತ್ತಿ ರೇಣುಕಾ ಯಲ್ಲಮ್ಮ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಸಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಬೆಂಗಳೂರು ಕಡೆಗೆ ಚಲಿಸುತ್ತಿದ್ದ ತಮಿಳುನಾಡು ಮೂಲದ ಲಾರಿ ತಮಟಗಲ್ಲು ಬಳಿ ರಸ್ತೆ ಬದಿಯಲ್ಲಿ ನಿಂತಿತ್ತು. ಹಿಂದಿನಿಂದ ವೇಗವಾಗಿ ಬಂದ ಇನ್ನೊವಾ ಕಾರು ನೇರವಾಗಿ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಅರ್ಧಭಾಗ ನಜ್ಜುಗುಜ್ಜಾಗಿದೆ. ಕಾರು ಚಾಲಕನ ನಿರ್ಲಕ್ಷ್ಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.