ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಗೌರವ ಧನಕ್ಕೂ ದುಡ್ಡಿಲ್ಲ ಎನ್ನಲು ನಾಚಿಕೆಯಾಗಲ್ವಾ ಎಂದು ಬಿಜೆಪಿ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕ ಗೌರವ ಧನ ಸಮರ್ಪಕವಾಗಿ ಪಾವತಿಯಾಗುತ್ತಿಲ್ಲ ಎಂಬ ವರದಿಗಳನ್ನು ಉಲ್ಲೇಖಿಸಿ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಗೌರವ ಧನ ನೀಡಲು 4.85 ಕೋಟಿ ರೂ. ಮೊತ್ತವನ್ನು ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂಬ ವರದಿಗಳ ಹಿನ್ನಲೆಯಲ್ಲಿ ಅವರು ಟೀಕಾಪ್ರಹಾರ ನಡೆಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಗೌರವಧನಕ್ಕೂ ದುಡ್ಡಿಲ್ದದ ದಿವಾಳಿ ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ 150 ಹಿರಿಯ ಜೀವಗಳಿಗೆ ಪ್ರತಿ ತಿಂಗಳು ನೀಡಬೇಕಾದ ₹10,000 ರೂಪಾಯಿ ಗೌರವಧನ ಕೊಡದೆ ₹4.5 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ಲಜ್ಜೆಗೇಡಿತನಕ್ಕೆ ಏನು ಹೇಳೋಣ?
ಅದ್ಯಾರೋ ಅನಾಮಿಕನ ಮಾತು ಕೇಳಿಕೊಂಡು ಎಡಪಂಥೀಯರ ತಾಳಕ್ಕೆ ಕುಣಿಯುತ್ತಾ ಧರ್ಮಸ್ಥಳದಲ್ಲಿ ನೂರಾರು ಕೋಟಿ ಖರ್ಚು ಮಾಡಿ ಸಿಕ್ಕಸಿಕ್ಕ ಕಡೆಯೆಲ್ಲ ಗುಂಡಿ ತೆಗೆಯೋಕೆ ದುಡ್ಡಿದೆ. ಆದರೆ ಸ್ವಾತಂತ್ರ್ಯ ಹೋರಾಟಗಾರರ ಗೌರವಧನವನ್ನ ಸಮಯಕ್ಕೆ ಸರಿಯಾಗಿ ಪಾವತಿ ಮಾಡಲು ದುಡ್ಡಿಲ್ಲ. ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ದೇಶಪ್ರೇಮವೂ ಇಲ್ಲ, ನಮ್ಮ ಧರ್ಮ ಬಗ್ಗೆ ಶ್ರದ್ಧೆಯೂ ಇಲ್ಲ ಎಂದು ಅಶೋಕ್ ಟೀಕಿಸಿದ್ದಾರೆ.